ಜಿಲ್ಲೆ

ಇನ್ನೆರಡು ವರ್ಷಗಳಲ್ಲಿ ಚೀನಾವನ್ನು ಜನಸಂಖ್ಯಾ ಸ್ಪೋಟದಲ್ಲಿ ಮೀರಿಸಲಿರುವ ಭಾರತ - ಡಾ.ನವೀನ್

ಸುನಿಲ್ ಪೊನ್ನೇಟಿ

ಮಡಿಕೇರಿ:

ಎರಡು ವರ್ಷಗಳಲ್ಲಿ ಚೀನಾವನ್ನೂ ಮೀರಿಸಿ ಭಾರತ ದೇಶವು ಜಗತ್ತಿನಲ್ಲಿಯೇ ಅತ್ಯಧಿಕ ಜನಸಂಖ್ಯೆ ಇರುವ ದೇಶವಾಗಲಿದ್ದು ಕೆಲವೊಂದು ಪ್ರತಿಕೂಲ ಪರಿಣಾಮಗಳನ್ನು ಎದುರಿಸುವ ಸವಾಲು ಎದುರಾಗಲಿದೆ ಎಂದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ಡಾ.ಎನ್.ಎಸ್. ನವೀನ್ ಕಳವಳ ವ್ಯಕ್ತಪಡಿಸಿದರು. ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಜನಸಂಖ್ಯಾ ದಿನಾಚರಣೆ ಸಂದರ್ಭ ಮಂಗಳವಾರ ಮಾತನಾಡಿದರು.

ಭಾರತ ವರ್ಷದಿಂದ ವರ್ಷಕ್ಕೆ ಜನಸಂಖ್ಯಾ ಸ್ಫೋಟ ಕಾಣುತ್ತಿದೆ. ಇದರಿಂದ ಆಹಾರ, ಉದ್ಯೋಗ ಸೇರಿದಂತೆ ವಿವಿಧ ರಂಗಗಳಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಬಡತನ ನಿರ್ಮೂಲನೆಯ ಉದ್ದೇಶ ಕೂಡ ಜನಸಂಖ್ಯಾ ನಿಯಂತ್ರಣದಲ್ಲಿದೆ ಎಂದರು. ಜಗತ್ತಿನಲ್ಲಿ ಪ್ರಸ್ತುತ ೮೦೦ ಕೋಟಿ ಜನರಿದ್ದು ಈ ಪೈಕಿ ೧೪೦ ಕೋಟಿ, ಜನ ಭಾರತದಲ್ಲಿದ್ದರೆ, ೧೪೨ ಕೋಟಿ ಜನರು ಚೀನಾದಲ್ಲಿದ್ದಾರೆ. ಅರಣ್ಯಗಳ ನಾಶ ಕೂಡ ಜನಸಂಖ್ಯಾ ಸ್ಪೋಟದ ಪರಿಣಾಮಗಳಲ್ಲೊಂದಾಗಿದೆ. ಇದರಿಂದಾಗಿ ಪ್ರವಾಹ, ಭೂಕುಸಿತದಂಥ ಪ್ರಾಕೃತ್ತಿಕ ವಿಕೋಪಗಳು ಸಂಭವಿಸುತ್ತಿದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ವೈದ್ಯ ನವೀನ್ ಅವರು ಕಳೆದ ೧೦ ವರ್ಷಗಳಿಂದ ಉದರದರ್ಶಕ ಕುಟುಂಬ ಕಲ್ಯಾಣ ಮತ್ತು ವಾಸೆಕ್ಟಮಿ ಸಂಬಂಧಿಸಿದ ೧೫ ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆ ಕೈಗೊಂಡು ದಾಖಲೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ರತ್ನಾಕರ್ ರೈ, ಸಹಾಯಕ ಗವರ್ನರ್ ದೇವಣಿರ ತಿಲಕ್, ಡಾ. ರಾಜೇಶ್ವರಿ ನವೀನ್, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಅನಂತಶಯನ, ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಗೌಡ, ಮಾಜಿ ಸಹಾಯಕ ಗವರ್ನರ್ ಗಳಾದ ಡಾ.ಪ್ರಶಾಂತ್, ಬಿ.ಕೆ.ರವೀಂದ್ರ ರೈ, ಅನಿಲ್ ಎಚ್.ಟಿ., ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಶ್ರೀಹರಿ, ಎ.ಕೆ.ವಿನೋದ್ ಇದ್ದರು.

ಈವರೆಗೆ ೧೫ ಸಾವಿರದಷ್ಟು ಉದರದರ್ಶಕ ಕುಟುಂಬ ಕಲ್ಯಾಣ ಮತ್ತು ವಾಸೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಎನ್.ಎಸ್. ನವೀನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.