ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿ ಅಂತಿಮ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆ.21ರಂದು ನಡೆಯುವ ಚುನಾವಣೆ ಗಾದಿಗೆ ರಾಜಕೀಯ ಮೇಲಾಟ ನಡೆದಿದೆ.
ಪಟ್ಟಣ ಪಂಚಾಯಿತಿ 17 ಸದಸ್ಯ ಬಲ ಹೊಂದಿದ್ದು, ಜೆಡಿಎಸ್, ಬಿಜೆಪಿ ತಲಾ 6 ಮತ್ತು ಕಾಂಗ್ರೆಸ್‌ನ ಐವರು ಸದಸ್ಯರು ಇದ್ದಾರೆ. ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದ ಪರಿಣಾಮ ಹೊಂದಾಣಿಕೆಯೊಂದಿಗೆ ಅಧಿಕಾರ ಹಿಡಿಯಬೇಕಿದೆ. ಈ ಬಾರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿರುವ ಪರಿಣಾಮ ಎಲ್ಲ ಪಕ್ಷಗಳ ಸದಸ್ಯರಲ್ಲಿ ಪೈಪೋಟಿ ಏರ್ಪಟ್ಟಿದೆ. ಅಧ್ಯಕ್ಷ ಗಾದಿಗೆ ಕಾಂಗ್ರೆಸ್‌ನಿಂದ ಪ್ರದೀಪ್‌ಕುಮಾರ್ ಹಾಗೂ ಬಿಜೆಪಿಯಿಂದ ರಮೇಶ್ ವಾಟಾಳ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಶತಾಯಗತಾಯ ಅಧ್ಯಕ್ಷ ಗಾದಿ ಹಿಡಿಯುವ ಸಲುವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ತಮ್ಮ ಸಹೋದರ ಪ್ರದೀಪ್‌ಕುಮಾರ್‌ಗೆ ಅಧ್ಯಕ್ಷ ಪಟ್ಟ ಕಟ್ಟಬೇಕೆಂಬ ಉದ್ದೇಶದಿಂದ ರಾಜಕೀಯ ತಂತ್ರಗಾರಿಕೆ ಹೆಣೆದಿದ್ದಾರೆ.
ಈ ವಿಚಾರ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ತಮ್ಮ ರಾಜಕೀಯ ಕಡುವೈರಿ ಪ್ರಸನ್ನಕುಮಾರ್‌ಗೆ ಎದಿರೇಟು ನೀಡುವ ಸಲುವಾಗಿ ಆರಂಭದಲ್ಲಿ ತಲೆಕೆಡಿಸಿಕೊಳ್ಳದ ಶಾಸಕ ಎ.ಮಂಜು ತಡವಾಗಿ ರಾಜಕೀಯ ದಾಳ ಉರುಳಿಸಲು ಯತ್ನಿಸಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬುದು ನಿಗೂಢವಾಗಿದೆ.
ರಾಜ್ಯದಲ್ಲಿ ಆಗಿರುವಂತೆ ಇಲ್ಲಿಯೂ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗದ್ದುಗೆ ಹಿಡಿಯಲು ಸುಲಭವಾಗುತ್ತಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ತಂಡವಾಗಿ ರೆಸಾರ್ಟ್ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಬಹುಮತ ಸಾಬೀತಿಗಾಗಿ ಒಮ್ಮತಕ್ಕೆ ಬರುವ ಸಲುವಾಗಿಯೇ ಆಕಾಂಕ್ಷಿಗಳ ಗುಂಪುಗಳು ಕಳೆದ ಒಂದು ವಾರದಿಂದಲೂ ಪ್ರವಾಸದಲ್ಲಿ ತೊಡಗಿವೆ.
ಒಂದು ಗುಂಪಿನಲ್ಲಿ ಕಾಂಗ್ರೆಸ್‌ನ ನಾಲ್ವರು, ಜೆಡಿಎಸ್‌ನ ನಾಲ್ಕು ಜನ ಹಾಗೂ ಬಿಜೆಪಿ ಇಬ್ಬರು ಸದಸ್ಯರು ಸೇರಿ ಹತ್ತು ಜನರಿದ್ದು, ಮತ್ತೊಂದು ಗುಂಪಿನಲ್ಲಿ ಬಿಜೆಪಿಯ ನಾಲ್ಕು, ಜೆಡಿಎಸ್‌ನ ಇಬ್ಬರು ಹಾಗೂ ಕಾಂಗ್ರೆಸ್‌ನ ಒಬ್ಬ ಸದಸ್ಯ ಸೇರಿ ಏಳು ಜನರಿದ್ದಾರೆ. ಈಗಾಗಲೇ ಕ್ಷೇತ್ರದಿಂದ ಹೊರಗೆ ಅಜ್ಞಾತ ಸ್ಥಳದಲ್ಲಿ ಉಳಿದುಕೊಂಡು ದಿನನಿತ್ಯ ನಡೆಯುವ ಚುನಾವಣೆ ವಿದ್ಯಮಾನಗಳನ್ನು ಅವಲೋಕಿಸುತ್ತಿದ್ದಾರೆ.
ಈ ಹಿಂದೆ ಮೊದಲ ಅವಧಿಯಲ್ಲಿ ಪಪಂ ಆಡಳಿತ ನಡೆಸಲು ಅಂದಿನ ಜೆಡಿಎಸ್ ಶಾಸಕರಾಗಿದ್ದ ಎ.ಟಿ.ರಾಮಸ್ವಾಮಿ ನಿರ್ದೇಶನದ ಮೇರೆಗೆ ಜೆಡಿಎಸ್‌ನ 6 ಸದಸ್ಯರು ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಜೆಡಿಎಸ್ ಸದಸ್ಯ ಹೂವಣ್ಣ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು. ಈ ನಡುವೆ ಆದ ಒಳ ಒಪ್ಪಂದಂತೆ ಉಳಿದ ಅವಧಿಗೆ ಜೆಡಿಎಸ್‌ನವರು ಅಧ್ಯಕ್ಷ ಹುದ್ದೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟ ಪರಿಣಾಮ ಕಾಂಗ್ರೆಸ್‌ನ ಅಬ್ದುಲ್ ಬಾಸಿತ್ ಹಾಗೂ ಶಾರದ ಪೃಥ್ವಿರಾಜ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಕವಲೊಡೆದ ಮೈತ್ರಿ: ಕ್ಷೇತ್ರದಲ್ಲಿ ಬಿಜೆಪಿಯಲ್ಲಿದ್ದ ಎ.ಮಂಜು ಈಗ ಜೆಡಿಎಸ್ ಶಾಸಕರಾಗಿದ್ದಾರೆ. ಜೆಡಿಎಸ್‌ನಲ್ಲಿದ್ದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಈಗ ಬಿಜೆಪಿಯಲ್ಲಿದ್ದಾರೆ. ಎಚ್.ಯೋಗಾರಮೇಶ್ ಬಿಜೆಪಿಯಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಶ್ರೀಧರ್‌ಗೌಡ, ಕೃಷ್ಣೇಗೌಡ ಕಾಂಗ್ರೆಸ್‌ನಲ್ಲಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್- ಜೆಡಿಎಸ್‌ನ ಹಳೆಯ ಮೈತ್ರಿ ಧರ್ಮ ಈ ಬಾರಿ ವರ್ಕೌಟ್ ಆಗುತ್ತಿಲ್ಲ. ಇದರಿಂದ ಎರಡು ಗುಂಪುಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ಸದಸ್ಯರು ಸೇರಿಕೊಂಡಿರುವುದು ಮುಂದಿನ ಅಧ್ಯಕ್ಷರ ಆಯ್ಕೆ ತೀಮಾರ್ನವನ್ನು ಈ ಮೂರು ಪಕ್ಷಗಳ ವರಿಷ್ಠರು ತೆಗೆದುಕೊಳ್ಳಲು ಕಠಿಣವೆನಿಸಿದೆ.
ಪಕ್ಷಾಂತರ ಪರ್ವ: ಜೆಡಿಎಸ್ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಆರಂಭದಲ್ಲಿ ಶಾಸಕ ಎ.ಮಂಜು ತಲೆಕೆಡಿಸಿಕೊಳ್ಳದೆ ಹಿಂದೇಟು ಹಾಕಿದರು. ಹೀಗಾಗಿ ಜೆಡಿಎಸ್‌ನ 6 ಸದಸ್ಯರ ಪೈಕಿ ಇಬ್ಬರು ಸದಸ್ಯರು ಬಿಜೆಪಿ ನೇತೃತ್ವದ ಗುಂಪಿನಲ್ಲಿದ್ದರೆ, ಉಳಿದ ನಾಲ್ಕು ಸದಸ್ಯರು ಕಾಂಗ್ರೆಸ್ ಸದಸ್ಯರ ಗುಂಪಿನೊಂದಿಗೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ಅದೇ ರೀತಿ 6 ಬಿಜೆಪಿ ಸದಸ್ಯರಲ್ಲಿ ಇಬ್ಬರು ಕಾಂಗ್ರೆಸ್ ಪಕ್ಷದ ನೇತೃತ್ವದ ಗುಂಪಿನಲ್ಲಿದ್ದು, ಉಳಿದ ನಾಲ್ವರು ಬಿಜೆಪಿ ಗುಂಪಿನಲ್ಲಿಯೇ ಉಳಿದುಕೊಂಡಿದ್ದಾರೆ. ಐವರು ಕಾಂಗ್ರೆಸ್ ಸದಸ್ಯರಲ್ಲಿ ಒಬ್ಬ ಸದಸ್ಯ ಮಾತ್ರ ಜೆಡಿಎಸ್-ಬಿಜೆಪಿ ನೇತೃತ್ವದ ಗುಂಪಿನಲ್ಲಿ ಗುರುತಿಸಿಕೊಂಡಿರುವುದು ಆಯ್ಕೆ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
ಕಾಂಗ್ರೆಸ್‌ಗೆ ಅಧಿಕಾರ: ಕಾಂಗ್ರೆಸ್ ನೇತೃತ್ವದ ಗುಂಪಿನಲ್ಲಿ ಜೆಡಿಎಸ್‌ನ 4 ಸದಸ್ಯರು ಮತ್ತು ಕಾಂಗ್ರೆಸ್ಸಿನ 4 ಸದಸ್ಯರು ಹಾಗೂ ಇಬ್ಬರು ಬಿಜೆಪಿ ಸದಸ್ಯರು ಸೇರಿ ಒಟ್ಟು 10 ಜನರು ಒಟ್ಟಿಗೆ ಇದ್ದು, ಚುನಾವಣೆಯಲ್ಲಿಯೂ ಇದೇ ಹೊಂದಾಣಿಕೆ ಮುಂದುವರಿದರೆ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎನ್ನಲಾಗಿದೆ.
ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು: ಈ ಹಿಂದೆ ಪಪಂನಲ್ಲಿ 6 ಸದಸ್ಯರೊಂದಿಗೆ ವಿರೋಧ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಜೆಪಿ ಸದಸ್ಯರು ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಜೆಡಿಎಸ್‌ನ ಇಬ್ಬರು ಸದಸ್ಯರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಚುನಾವಣೆ ವೇಳೆ ಕಾಂಗ್ರೆಸ್ ಸದಸ್ಯರ ಗುಂಪಿನಲ್ಲಿರುವ ಇಬ್ಬರು ಬಿಜೆಪಿ ಸದಸ್ಯರ ಬೆಂಬಲ ಸಿಗುವ ವಿಶ್ವಾದಲ್ಲಿಯೂ ಇದ್ದಾರೆ ಎನ್ನಲಾಗಿದೆ. ಇದರೊಂದಿಗೆ ಒಬ್ಬ ಕಾಂಗ್ರೆಸ್ ಸದಸ್ಯನ ಬೆಂಬಲವೂ ವ್ಯಕ್ತವಾಗಿದೆ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕ್ಷೇತ್ರದ ಶಾಸಕರು, ಸಂಸದರು ಸಹ ಮತದಾನದಲ್ಲಿ ಬಲ ನೀಡುವ ಸಾಧ್ಯತೆಯಿದೆ. ಪಪಂ ವರಿಷ್ಠರ ಹುದ್ದೆ ಮೇಲೆ ಕಣ್ಣಿಟ್ಟು ಗುಂಪುಗಳಲ್ಲಿ ತೊಡಗಿರುವವರಿಗೆ ಆಯಾ ಪಕ್ಷದ ಆಕಾಂಕ್ಷಿತ ಅಧ್ಯಕ್ಷರು ಸದಸ್ಯರಿಗೆ ವಿಪ್ ಜಾರಿ ಮಾಡಿದರೆ ಸಂಕಷ್ಟ ಎದುರಾಗಲಿದೆ. ಪಕ್ಷದ ಮುಖಂಡರು ವಿಪ್ ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು ಇದಕ್ಕೆಲ್ಲ ಆಗಸ್ಟ್ 21ರಂದು ನಡೆಯುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಉತ್ತರ ದೊರೆಯಲಿದೆ.