ಚಿಕ್ಕಬಳ್ಳಾಪುರ: ಪುರಾಣ ಪ್ರಸಿದ್ಧ ತಾಲೂಕಿನ ಕಳವಾರ ಗ್ರಾಮದ ಪಾಪಾಘ್ನಿ ಮಠದಲ್ಲಿ ಶ್ರೀ ಶರಭಯೋಗೇಂದ್ರ ಸ್ವಾಮಿ ಅವರ ೩೦೫ ನೇ ಆರಾಧನಾ ಮಹೋತ್ಸವ ಪ್ರಯುಕ್ತ ಹೋಮ ಹವನ ಸೇರಿದಂತೆ ಧಾರ್ಮಿಕ ವಿಶೇಷ ಪೂಜೆ ನೆರವೇರಿತು.
ಬೆಳಗ್ಗೆ ಸುಪ್ರಭಾತ ಸೇವೆ, ನಾದಸ್ವರ ಮತ್ತು ಗಣಪತಿ ಪೂಜೆ, ದ್ವಾರ ಪೂಜೆ, ಧ್ವಜಾರೋಹಣ, ಸ್ವಸ್ತಿ ಪುಣ್ಯಾಹವಚನ ನಡೆಯಿತು. ಶ್ರೀ ಶರಭಯೋಗೇಂದ್ರಸ್ವಾಮಿಯ ರುದ್ರ ಲಿಂಗ, ಶ್ರೀ ಅನ್ನಪೂರ್ಣೇಶ್ವರಿ, ಕಾಶಿ ವಿಶ್ವನಾಥ ದೇವರಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆ, ಅಗ್ನಿ ಪ್ರತಿಷ್ಠಾಪನೆ, ನವಗ್ರಹ, ದುರ್ಗಾ, ಮೃತ್ಯುಂಜಯ ಮತ್ತು ಜಯಾದಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನಡೆಯಿತು.
ದೇವಾಲಯದಲ್ಲಿರುವ ಶ್ರೀ ಕಾಶಿವಿಶ್ವನಾಥ, ಅನ್ನಪೂರ್ಣೇಶ್ವರಿ, ವಿಶ್ವಕರ್ಮ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ಅವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ಅವರ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ಮೆರವಣಿಗೆ ನಡೆಸಲಾಯಿತು. ದೇವಾಲಯದ ಆವರಣದಲ್ಲಿ ಭಕ್ತರಿಂದ ತತ್ವಾತೀತ ಭಜನೆ ಕಾರ್ಯಕ್ರಮ ನಡೆಯಿತು.
ಇನ್ನೂ ಭಕ್ತಾದಿಗಳಿಗೆ ದೇವಾಲಯ ಸಮಿತಿಯು ಅನ್ನಸಂತರ್ಪಣೆಯನ್ನು ಕೈಗೊಂಡಿತ್ತು. ಆರಾಧನಾ ಮಹೋತ್ಸವಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ಆಂಧ್ರಪ್ರದೇಶದಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು.
*ಕಾಲಜ್ಞಾನಿಯ ತಪೋಭೂಮಿ ಪಾಪಾಘ್ನಿ ಮಠ
ಕಾಲಜ್ಞಾನಿ ಶ್ರೀ ವೀರಬ್ರಹ್ಮೇಂದ್ರಸ್ವಾಮಿ ಬಾಲ್ಯವನ್ನು ಕಳೆದ ಪುಣ್ಯಕ್ಷೇತ್ರ ಪಾಪಾಘ್ನಿ ಮಠ. ಸ್ಕಂದಗಿರಿಯ (ಕಳವಾರ ಬೆಟ್ಟ) ತಪ್ಪಲಿನಲ್ಲಿ ಪ್ರಶಾಂತವಾದ ಸ್ಥಳದಲ್ಲಿದೆ. ಪೌರಾಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಶೇಷತೆಯ ಮೂಲಕ ಪ್ರಖ್ಯಾತಿಯನ್ನು ಹೊಂದಿದೆ. ಜನರ ಪಾಪ ವಿನಾಶದ ದೈವ ಸ್ಥಳವಾಗಿದೆ.
ಶ್ರೀ ವೀರಭೋಜಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಕ್ಕೆ ಹಲವು ಶತಮಾನಗಳ ಇತಿಹಾಸ ಇದೆ. ಚೋಳರಸರ ಕಾಲದಲ್ಲಿ ಕಳವಾರ ನಾಡಿನಲ್ಲಿ ಶಿವಚಾರಣೆ ಪ್ರಬಲಗೊಂಡು ರುದ್ರಪೀಠ ಸ್ಥಾಪನೆಯಾಗುತ್ತದೆ. ಬಳಿಕ ಪಾಪಾಘ್ನಿ ಮಠ ಎಂಬುದಾಗಿ ಖ್ಯಾತಿ ಪಡೆದಿದ್ದು ಶಿವಲಿಂಗ ಪ್ರತಿಷ್ಠಾಪನೆ ಮತ್ತು ತಾಯಿ ಅನ್ನಪೂರ್ಣೆಶ್ವರಿ ನೆಲೆಸುವುದರೊಂದಿಗೆ ಮಠವು ಬೆಳವಣಿಗೆಯಾಗಿದೆ. ವಿವಿಧ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತಿದೆ.
*ಮಠದಲ್ಲಿ ಬಾಲ್ಯ ಕಳೆದ ಕಾಲಜ್ಞಾನಿ
ರುದ್ರಪೀಠದ ಅಧಿಪತಿಗಳಾಗಿದ್ದ ವೀರಭೋಜಾಚಾರ್ಯ ಮತ್ತು ಧರ್ಮ ಪತ್ನಿ ವೀರಪಾಪಮಾಂಬಗೆ ಸಂತಾನಭಾಗ್ಯ ಇಲ್ಲದ ಕೊರಗು ಕಾಡುತ್ತಿತ್ತು. ಒಂದು ದಿನ ಸಾಧುವೊಬ್ಬ ಮಠಕ್ಕೆ ಆಗಮಿಸಿ, ಕಾಶಿಯಾತ್ರೆಯಿಂದ ಮಹಾವಿಷ್ಣು ಸಂಭೂತನಾದ ಶಿಶುವಿನ ಪ್ರಾಪ್ತವಾಗುತ್ತದೆ ಎಂದು ದಂಪತಿಗೆ ಆಶೀರ್ವದಿಸುತ್ತಾರೆ. ಅದರಂತೆ ಕಾಶಿಯಾತ್ರೆ ಕೈಗೊಂಡ ಸಂದರ್ಭದಲ್ಲಿ ಕಾಶಿ ನಗರ ಸಮೀಪ ಸರಸ್ವತಿ ನದಿ ತೀರದಲ್ಲಿರುವ ಅತ್ರಿಋಷಿ ಆಶ್ರಮಕ್ಕೆ ಭೇಟಿ ನೀಡಿದಾಗ ದಂಪತಿಗೆ ಹಸುಗೂಸನ್ನು ಸಾಕಲು ನೀಡಲಾಗುತ್ತದೆ. ಆ ಮಗುವಿಗೆ ವೀರಂಭೋಟ್ಲಯ್ಯ ಎಂಬುದಾಗಿ ನಾಮಕಾರಣ ಮಾಡಲಾಗುತ್ತದೆ. ಇವರೇ ಕಲಿಯುಗದ ಕಾಲಜ್ಞಾನಿ ಶ್ರೀ ಪೋತುಲೂರಿ ವೀರಬ್ರಹ್ಮೇಂದ್ರಸ್ವಾಮಿ. ಪಾಪಾಘ್ನಿ ಮಠದಲ್ಲಿ ಬಾಲ್ಯವನ್ನು ಕಳೆದರು. ಬಳಿಕ ಲೋಕ ಕಲ್ಯಾಣಕ್ಕಾಗಿ ವಿವಿಧೆಡೆ ಸಂಚರಿಸಿ, ತಪೋ ಬಲದಿಂದ ಕಲಿಯುಗದ ಕಾಲಜ್ಞಾನ ರಚಿಸಿದರು.