ಗುಡಿಬಂಡೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ವಿಸ್ತರಿಸಿ ಪುರಸಭೆ ಮಾಡುವಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಅನೇಕ ವರ್ಷಗಳಿಂದ ಗುಡಿಬಂಡೆ ಪಟ್ಟಣ ಪಂಚಾಯಿತಿ ವ್ಯಾಪ್ತಿ ಕೇವಲ 11 ವಾರ್ಡ್‌ಗಳಿಗೆ ಸೀಮಿತವಾಗಿದೆ. ಇದನ್ನು ವಿಸ್ತರಿಸದಿರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಈಗಿರುವ ಪಟ್ಟಣ ಪಂಚಾಯಿತಿಗೆ ಸುಮಾರು 3 ಕಿಲೋ ಮೀಟರ್ ವ್ಯಾಪ್ತಿಯನ್ನು ಒಳಪಡಿಸಿ ವಾರ್ಡ್‌ಗಳನ್ನು ಹೆಚ್ಚಿಸುವ ಮೂಲಕ ಆದಾಯ ವೃದ್ಧಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ವಿಶೇಷವಾಗಿ ಪಟ್ಟಣ ಪಂಚಾಯಿತಿಗೆ ಹಳೇ ಗುಡಿಬಂಡೆ, ರೂರಲ್ ಗುಡಿಬಂಡೆ, ಉಪ್ಪಾರಹಳ್ಳಿ, ಬ್ರಾಹ್ಮಣರಹಳ್ಳಿಯನ್ನು ಸೇರಿಸಿದರೆ ವಿಸೀರ್ಣ ಮತ್ತು ಜನಸಂಖ್ಯೆ ಹೆಚ್ಚಾಗಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಅವಕಾಶಗಳಿವೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅಧಿಕಾರದ ಲೆಕ್ಕಾಚಾರ
ಈಗಿರುವ 11 ವಾರ್ಡ್‌ಗಳಿಗೆ ಬೇರೆ ಗ್ರಾಮಗಳನ್ನು ಸೇರಿಸಿದರೆ ಅಧಿಕಾರ ಸಿಗುವುದು ಕಷ್ಟವಾಗುತ್ತದೆ. ವಿಶೇಷವಾಗಿ ಹಳೇ ಗುಡಿಬಂಡೆ ಮತ್ತು ಬ್ರಾಹ್ಮಣರಹಳ್ಳಿಯಲ್ಲಿ ಕೆಲ ಪ್ರಭಾವಿ ರಾಜಕೀಯ ವ್ಯಕ್ತಿಗಳಿದ್ದು, ಹಾಲಿ ಪಪಂ ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಕೈತಪ್ಪುತ್ತದೆ ಎಂದು ವ್ಯಾಪ್ತಿಯನ್ನು ವಿಸ್ತರಿಸುತ್ತಿಲ್ಲ ಎಂಬ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಪಟ್ಟಣಕ್ಕೆ ಹತ್ತಿರವಿದ್ದರೂ ಸೇರ್ಪಡೆಯಿಲ್ಲ
ಗುಡಿಬಂಡೆಗೆ ಅಂಟಿಕೊಂಡಂತೆ ರೂರಲ್ ಗುಡಿಬಂಡೆ ಇದ್ದರೂ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿಲ್ಲ. ರೂರಲ್ ಗುಡಿಬಂಡೆಯಲ್ಲಿ ಹೆಚ್ಚು ಅಂಗಡಿ ಮಳಿಗೆಗಳು ಸೇರಿ ಇತರ ಆದಾಯ ತರುವ ಕಟ್ಟಡಗಳಿವೆ. ಆದರೂ ಪಪಂ ವ್ಯಾಪ್ತಿಗೆ ಸೇರಿಸಿಕೊಳ್ಳದೇ ಪಟ್ಟಣ ಪಂಚಾಯಿತಿಗೆ ಬರುವ ಆದಾಯ ಗ್ರಾಮ ಪಂಚಾಯಿಗಳಿಗೆ ಸೇರುತ್ತಿವೆ. ಕೆಲ ಪಟ್ಟಭದ್ರ ರಾಜಕೀಯ ವ್ಯಕ್ತಿಗಳು ಬಡಾವಣೆ ನಿರ್ಮಾಣ ಮಾಡುವಾಗ ಪಟ್ಟಣಕ್ಕೆ ಹತ್ತಿರದಲ್ಲೆ ಬಡಾವಣೆ ಇದ್ದರೂ ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ ಎಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿಗೆ ಸೇರಿಸುತ್ತಿದ್ದಾರೆ.
ಕೇವಲ ಸರ್ವೇ ನಂಬರ್ ಸೇರ್ಪಡೆಗೆ ಮನವಿ
ಇತ್ತೀಚೆಗೆ ಪಪಂ ಅಧಿಕಾರಿಗಳು ಆದಾಯದ ಮೂಲ ಉದ್ದೇಶದಿಂದ ಪಟ್ಟಣಕ್ಕೆ ಹೊಂದಿಕೊಂಡಿರುವ 243 ಸರ್ವೇ ನಂಬರ್‌ಗಳನ್ನು ಪಟ್ಟಣ ಪಂಚಾಯಿತಿ ಸೇರ್ಪಡೆ ಮಾಡಿಕೊಳ್ಳಲು ನಕ್ಷೆ ಗುರುತಿಸುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದು, ಇದು ಕೇವಲ ಸರ್ವೇ ನಂಬರ್‌ಗಳಾಗಿವೆ. ಆದರೆ, ಪಟ್ಟಣಕ್ಕೆ ರೂರಲ್ ಗುಡಿಬಂಡೆ, ಹಳೇ ಗುಡಿಬಂಡೆ, ಉಪ್ಪಾರಹಳ್ಳಿ ಮತ್ತು ಬ್ರಾಹ್ಮಣರಹಳ್ಳಿಯನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.
ನಕ್ಷೆ ಗುರುತು ಅವೈಜ್ಞಾನಿಕ
ಈಗಾಗಲೇ ಅವೈಜ್ಞಾನಿಕವಾಗಿ ಗುಡಿಬಂಡೆಯ ಪೂರ್ವಕ್ಕೆ ಅಮಾನಿಬೈರಸಾಗರ ಮತ್ತು ನೀರಾವರಿ ಜಮೀನುಗಳು, ಪಶ್ಚಿಮಕ್ಕೆ ವಿದ್ಯಾಗಿರಿಬೆಟ್ಟ, ವೃದ್ಧಾಶ್ರಮ ಮತ್ತು ಇತರ ಸರ್ವೇ ನಂಬರ್‌ಗಳು, ಉತ್ತರಕ್ಕೆ ಸುರಸದ್ಮಗಿರಿ ಬೆಟ್ಟ, ಅಂಜನೇಯ್ಯಸ್ವಾಮಿ ದೇವಸ್ಥಾನ ಮತ್ತು ಉಪ್ಪಾರಹಳ್ಳಿ, ದಕ್ಷಿಣಕ್ಕೆ ಹಳೇ ಗುಡಿಬಂಡೆ, ರಾಮಪಟ್ಟಣಕ್ಕೆ ಹೋಗುವ ರಸ್ತೆ ಮತ್ತು ಬ್ರಾಹ್ಮಣರಹಳ್ಳಿ ಜಮೀನುಗಳನ್ನು ಮಾತ್ರ ಗುರುತಿಸಿದೆ. ಗ್ರಾಮಗಳನ್ನು ಹೊರಗಿಡಲಾಗಿದೆ.
"ಗುಡಿಬಂಡೆ ಅಭಿವೃದ್ಧಿ ಆಗಬೇಕಾದರೆ ವ್ಯಾಪ್ತಿಯನ್ನು ವಿಸ್ತರಿಸಿ ಆದಾಯ ಹೆಚ್ಚಿಸಿಕೊಳ್ಳಬೇಕು. ಜತೆಗೆ ಪಟ್ಟಣ ಪಂಚಾಯಿತಿಯಿಂದ ಪುರಸಭೆಗೆ ಮೇಲ್ದರ್ಜೆಗೇರಿಸಬೇಕು, ಆದ್ದರಿಂದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ರೂರಲ್ ಗುಡಿಬಂಡೆ, ಹಳೇಗುಡಿಬಂಡೆ, ಬ್ರಾಹ್ಮಣರಹಳ್ಳಿ ಮತ್ತು ಉಪ್ಪಾರಹಳ್ಳಿಯನ್ನು ಸೇರಿಸಿಕೊಳ್ಳಬೇಕಾಗಿದೆ." - ಅಪ್ಸರ್ ಪಾಷಾ, ಪಪಂ ಮಾಜಿ ಅಧ್ಯಕ್ಷ, ಗುಡಿಬಂಡೆ "ಪಟ್ಟಣ ಪಂಚಾಯಿತಿಯನ್ನು ವಿಸ್ತರಣೆ ಮಾಡುವ ಬಗ್ಗೆ ಸಾಮಾನ್ಯಸಭೆ ಕರೆದು ಸದಸ್ಯರ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಈಗಾಗಲೇ ಇಲಾಖೆಯಿಂದ ತಹಸೀಲ್ದಾರ್‌ರಿಗೂ ನಕ್ಷೆ ಗುರುತಿಸಿಕೊಡುವಂತೆ ಪತ್ರ ವ್ಯವಹಾರ ಮಾಡಲಾಗಿದೆ." - ಸಬಾಶೀರಿನ್, ಪಪಂ, ಮುಖ್ಯಾಧಿಕಾರಿ, ಗುಡಿಬಂಡೆ.