ಜಿಲ್ಲೆ

ಸಾಹಿತ್ಯಕ್ಕೆ ಪಂಜೆಮಂಗೇಶರಾಯರ ಕೊಡುಗೆ ಅಪಾರ: ರಾಜೇಶ್ ಯಲ್ಲಪ್ಪ

ಮಡಿಕೇರಿ: ಖ್ಯಾತ ಸಾಹಿತಿ ಪಂಜೆ ಮಂಗೇಶರಾಯರ ಬದುಕು ಎಲ್ಲರಿಗೂ ಆದರ್ಶವಾಗಬೇಕೆಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಮಡಿಕೇರಿ ನಗರ ಸಭಾ ಸದಸ್ಯ ಬಿ.ವೈ.ರಾಜೇಶ್ ಯಲ್ಲಪ್ಪ ಹೇಳಿದರು.

ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಯೋಗದೊಂದಿಗೆ ಪ್ರೌಢಶಾಲಾ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪಂಜೆ ಮಂಗೇಶರಾಯರ ಬದುಕು ಬರಹ ಕುರಿತು ವಿಚಾರ ಸಂಕಿರಣ ಹಾಗೂ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಮಂಗೇಶರಾಯರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅವರ ಕೊಡುಗೆ ಅಪಾರವಾದುದು. ಮಡಿಕೇರಿಯ ಪದವಿ ಪೂರ್ವ ಕಾಲೇಜಿನಲ್ಲೂ ಮುಖ್ಯೋಪಾಧ್ಯಾಯರಾಗಿ ಸೇವೆ ಮಾಡಿರುವದು ಹೆಮ್ಮೆಯ ವಿಷಯವಾಗಿದೆ. ಅವರು ರಚಿಸಿರುವ ಹುತ್ತರಿ ಹಾಡು ಇಂದಿಗೂ ಪ್ರಸ್ತುತವಾಗಿದೆ. ಅವರ ಸರಳ ಜೀವನ ಆದರ್ಶಪ್ರಾಯವಾಗಿದೆ ಎಂದರು. ಸ್ನೇಹ ಸಿರಿ ಬಳಗದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸಹಕಾರ ನೀಡುವದಾಗಿ ಹೇಳಿದರು.

ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಸ್.ಲೊಕೇಶ್ ಸಾಗರ್ ಮಾತನಾಡಿ, ಈ ವರ್ಷ ಹಲವು ಸಂಭ್ರಮಗಳಿಗೆ ಸಾಕ್ಷಿಯಾಗಿದೆ. ಕರ್ನಾಟಕಕ್ಕೆ ಸುವರ್ಣ ಸಂಭ್ರಮ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ ೨೦೦ನೇ ವರ್ಷ, ಅದೇ ರೀತಿ ಪಂಜೆ ಮಂಗೇಶರಾಯರು ಜನಿಸಿ ೧೫೦ನೇ ವರ್ಷವಾಗಿದೆ. ಇಂತಹ ಸುಸಂದರ್ಭದಲ್ಲಿ ಮಂಗೇಶರಾಯರು ಸೇರಿದಂತೆ ನಾಡಿಗಾಗಿ ಸೇವೆ ಸಲ್ಲಿಸಿದವರ ನೆನಪಿಸಿಕೊಳ್ಳವದು, ಅವರುಗಳ ಬಗ್ಗೆ ಇಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ನಗರಸಭಾ ಸದಸ್ಯ ಮಹೇಶ್ ಜೈನಿ ಮಾತನಾಡಿ, ಕನ್ನಡ ಸ್ನೇಹ ಸಿರಿ ಬಳಗ ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸಿದವರ ನೆನಪು ಮಾಡಿಕೊಳ್ಳುವಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಪಂಜೆ ಮಂಗೇಶರಾಯರ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮವಾದುದು. ಇನ್ನು ಮುಂದಕ್ಕೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಹಲವು ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಸರಕಾರಿ ಪ.ಪೂ. ಕಾಲೇಜು ಸಾಧಕರ ಮನೆಯಾಗಿದೆ. ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರೆಂದು ಹೇಳಿದರು.

ವಿದ್ಯಾರ್ಥಿಗಳು ಕೇವಲ ಪಠ್ಯ ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಓದು, ಬರವಣಿಗೆ ಹವ್ಯಾಸಗಳನ್ನು ಬೆಳೆಸಿಕೊಂಡಲ್ಲಿ ಜ್ಞಾರ್ಜನೆಯೊಂದಿಗೆ ಭವಿಷ್ಯದಲ್ಲಿ ಅಂಕಗಳಿಸಲು ಅನುಕೂಲವಾಗುತ್ತದೆ. ಒಳ್ಳೆಯ ವಿಚಾರಗಳತ್ತ ಗಮನ ಹರಿಸಿ, ಕೆಟ್ಟ ವಿಚಾರಗಳನ್ನು ಬದಿಗಿರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಉಪ ಪ್ರಾಂಶುಪಾಲೆ ಶಶಿಕಲಾ ಮಾತನಾಡಿ, ಕನ್ನಡ ಸ್ನೇಹ ಸಿರಿ ಬಳಗದ ವತಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಬಹಳ ಉಪಯುಕ್ತವಾದುದಾಗಿದೆ. ಇದರಿಂದ ಮಕ್ಕಳಿಗೆ ಉತ್ತಮ ವಿಚಾರಗಳನ್ನು ತಿಳಿದುಕೊಳ್ಳಲು ಒಂದು ವೇದಿಕೆ ಸಿಕ್ಕಂತಾಗಿದೆ. ವಿದ್ಯಾರ್ಥಿಗಳು ಪಾಠದೊಂದಿಗೆ ಇತರ ಸಾಧಕರ ವಿಚಾರಗಳನ್ನು ಕೂಡ ತಿಳಿದುಕೊಳ್ಳಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಮಂಗೇಶರಾಯರ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಭಾಗವಹಿಸಿದವರೆಲ್ಲರಿಗೂ ಪ್ರಶಂಸನಾ ಪತ್ರ ನೀಡಲಾಯಿತು. ಗೀತ ಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಂಗೇಸರಾಯರ ಗೀತೆಗಳು ಸೇರಿದಂತೆ ಇತರ ಭಾವಗೀತೆ, ದಾಸರ ಪದಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಡಿ.ಶಿವಶಂಕರ್ ಹಾಗೂ ಇತರರಿದ್ದರು. ಶಿಕ್ಷಕಿ ಸೌಮ್ಯಲತ ಸ್ವಾಗತಿಸಿದರೆ, ಉಷಾ ನಿರೂಪಿಸಿ, ಸುಜಾತ ವಂದಿಸಿದರು. ಈ ಸಂದರ್ಭದಲ್ಲಿ ರಾಜೇಶ್, ಮಹೇಶ್ ಜೈನಿ ಹಾಗೂ ಉಪ ಪ್ರಾಂಶುಪಾಲೆ ಶಶಿಕಲಾ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.