ಚನ್ನಗಿರಿ: ಭೂಮಿಯಲ್ಲಿ ಮನುಷ್ಯನಾಗಿ ಜನಿಸಿದ ಮೇಲೆ ಶಿವತತ್ವ ಜ್ಞಾನವನ್ನು ತಿಳಿಯದೆ ಹೋದರೆ ಪ್ರಾಣಿ- ಪಕ್ಷಿಗಳಿಗಿಂತ ಕಡೆ ಎಂಬುದು ಪ್ರಸ್ತುತ ವಿದ್ಯಮಾನದಲ್ಲಿ ಸತ್ಯವಾಗಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 875ನೇ ಮಾಸಿಕ ಶಿವಾನುಭವ ಹಾಗೂ ಶರಣ ಮಾಚಿದೇವರ ಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರ ತತ್ವ, ಆದರ್ಶ ಹಾಗೂ ಚಿಂತನೆಗಳಿಗೆ ಮನಸೋತು ನೂರಾರು ಶರಣರು ಅವರೊಂದಿಗೆ ಸೇರಿಕೊಂಡು ನಿಸ್ವಾರ್ಥವಾಗಿ ಸಮಾಜದ ಏಳಿಗೆಗಾಗಿ ಕಾಯಕ ಮಾಡಿದರು. ಅವರಲ್ಲಿ ಮಡಿವಾಳ ಮಾಚಿದೇವರು ಒಬ್ಬರು. ಇವರು ಬರೆದ ವಚನಗಳಲ್ಲಿ 64 ವಿದ್ಯೆಗಳು ಅಡಕಗೊಂಡಿದೆ. ಜತೆಗೆ ಜೀವನದಲ್ಲಿ ಸಂಸ್ಕಾರವಂತರಾಗಿ ಯಾರ ಮನಸ್ಸು ನೋಯಿಸದೇ ಇನ್ನೊಬ್ಬರಿಗೆ ಒಳಿತನ್ನು ಬಯಸುವ ಮತ್ತು ಎಲ್ಲ ಸಕಲ ಜೀವಾತ್ಮಗಳಿಗೆ ಲೇಸನ್ನು ಬಯಸುವ ಪ್ರತಿಯೊಬ್ಬರು ಶರಣರು ಎಂದು ತಿಳಿಸಿದ್ದಾರೆ ಎಂದರು.
ನಮ್ಮ ಧರ್ಮ ನಮಗೆ ಶ್ರೇಷ್ಠವಾದಂತೆ ಇನ್ನೊಬ್ಬರ ಧರ್ಮ ಅವರಿಗೆ ಶ್ರೇಷ್ಠವಾಗಿರುತ್ತದೆ. ಮಾತಿನಲ್ಲಿ ಪ್ರೀತಿ, ನಂಬಿಕೆ, ಸತ್ಯ ಮತ್ತು ನಡೆದಂತೆ ನುಡಿಯುವುದನ್ನು ಕಲಿಯಬೇಕು ಎಂದು ಮಾಚಿದೇವರು ಹೇಳಿದ್ದಾರೆ. ಮನಸ್ಸಿನಲ್ಲಿರುವ ಮಲಿನತೆಯನ್ನು ಹೊರಹಾಕಿದಾಗ ಮಾತ್ರ ಮನುಷ್ಯನಾಗಲು ಸಾಧ್ಯ ಎಂದು ಹೇಳಿದರು.
ತಹಸೀಲ್ದಾರ್ ಎನ್.ಜೆ. ನಾಗರಾಜ್ ಮಾತನಾಡಿ, 12ನೇ ಶತಮಾನದ ಶರಣರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ. ಶರಣರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ನಡೆಯಬೇಕಿದೆ. ಆಧುನಿಕತೆ ಹಾಗೂ ತಂತ್ರಜ್ಞಾನದ ಯುಗದಲ್ಲಿ ಧರ್ಮದ ತತ್ವ ಆದರ್ಶಗಳು ಮೊಟಕಾಗದಂತೆ ನಾವು ಕಾಪಾಡಬೇಕಿದೆ. ಮಠಗಳಲ್ಲಿ ನಡೆಸುವ ಶಿವಗೋಷ್ಠಿಗಳಲ್ಲಿ ಭಾಗವಹಿಸಿ ಮನಸ್ಸಿನ ಒತ್ತಡದಿಂದ ಹೊರಬಂದು ಮನಸ್ಸಿನ ನೆಮ್ಮದಿಯನ್ನು ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಗದಗ ಪಟ್ಟಣದ ವಯಲಿನ್ ಕಲಾವಿದೆ ವಾಣಿಶ್ರೀ ಅವರಿಂದ ಸಂಗೀತ ಕಚೇರಿ ನಡೆಸಲಾಯಿತು. ಚನ್ನಗಿರಿ ತಾಲೂಕು ಸಿದ್ದನಮಠ ಗ್ರಾಮದ ಸಿದ್ದೇಶ್ ರಚಿಸಿದ ಸಾಧನೆಗೆ ಸಾವಿರ ದಾರಿಗಳು ಹಾಗೂ ಅಭಿಸಾರಕೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ತುಮ್ೋಸ್ ಮಾಜಿ ಅಧ್ಯಕ್ಷ ಆರ್.ಎಂ. ರವಿ, ಜೆ.ಬಿ. ಕವಿತಾ ಚಂದ್ರಪ್ಪ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಇಲಾಖೆ ಕಲ್ಯಾಣಾಧಿಕಾರಿ ರವಿ ಅಥರ್ಗ, ಸುಮಾ ಯತೀಶ್, ಜ್ಯೋತಿ, ಶಿವಲಿಂಗಯ್ಯ, ಜಂತಿಕೊಳಲು ಮಹಾದೇವಪ್ಪ, ಧನಂಜಯ, ಎಂ.ಬಿ. ನಾಗರಾಜ್ ಇದ್ದರು.