ಚನ್ನಗಿರಿ: ಮಹಿಳೆಯರಿಗೆ ಮೊದಲು ಸಾಮಾಜಿಕ ಸಮಾನತೆ ನೀಡಿದ ಕೀರ್ತಿ 12ನೇ ಶತಮಾನದ ಶರಣ ಪರಂಪರೆಗೆ ಸಲ್ಲುತ್ತದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವಸ್ವಾಮಿ ತಿಳಿಸಿದರು.
ತಾಲೂಕಿನ ಸಂತೇಬೆನ್ನೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ರಾಜ್ಯ ಮತ್ತು ತಾಲೂಕು ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪೋಕ್ಸೋ ಕಾಯ್ದೆಯ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಟುಂಬ ನಿರ್ವಹಣೆ, ಸಂಸ್ಕಾರ ಹಾಗೂ ಶಿಕ್ಷಣವನ್ನು ಮಹಿಳೆಗೆ ನೀಡಿದರೆ ಕುಟುಂಬ ಮತ್ತು ಸಮಾಜ ಸುಧಾರಣೆಗೆ ನೆಲೆಯಾಗುತ್ತದೆ. ಇತಿಹಾಸ, ವಿಜ್ಞಾನ, ರಾಜಕೀಯ ಹಾಗೂ ಸಾಹಿತ್ಯದ ಎಲ್ಲ ಕ್ಷೇತ್ರದಲ್ಲಿ ಮಹಿಳೆ ಪ್ರಾವೀಣ್ಯ ಪಡೆದಿದ್ದಾಳೆ. ಶರಣರು ಮಹಿಳೆಯೇ ಸಮಾಜದ ಕಣ್ಣು ಎಂದು ಸಾರಿದ್ದಾರೆ ಎಂದರು.
ಚನ್ನಗಿರಿ ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ದಲಿಂಗಯ್ಯ ಗಂಗಾಧರ ಮಠ ಮಾತನಾಡಿ, ಪ್ರಸ್ತುತ ಪೋಕ್ಸೋ ಕಾಯ್ದೆ ಅವಶ್ಯಕವಾಗಿದೆ. ಮಕ್ಕಳ ಶಿಸ್ತುಬದ್ಧ ಜೀವನ ರೂಪಿಸುವ ಜವಾಬ್ದಾರಿ ಪಾಲಕರದ್ದಾಗಿದೆ. ಮಕ್ಕಳ ಮೇಲೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಿಸಲು ನಾಗರಿಕರು ಮುಂದಾಗಬೇಕು. ಜತೆಗೆ ಕಾನೂನು ಅರಿವು ಮೂಡಿಸಬೇಕು ಎಂದು ಹೇಳಿದರು.
ಪ್ರಾಧ್ಯಾಪಕಿ ಟಿ.ಬಿ. ಜ್ಯೋತಿ ಮಾತನಾಡಿ, ಪುರಾಣ ಮತ್ತು ಧರ್ಮಶಾಸ್ತ್ರಗಳ ಕಾಲದಲ್ಲಿ ಮಹಿಳೆಯ ಸ್ಥಿತಿ ಅಧೋಗತಿಗೆ ಹೋಗಿತ್ತು. ಶರಣ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ನೀಡಿದ ಗೌರವ ಮತ್ತು ಸ್ಥಾನಮಾನ ವಿಶೇಷವಾಗಿದೆ. ಆದರೆ ಪ್ರಸ್ತುತ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದರು.
ಪ್ರಾಚಾರ್ಯ ಗಿರಿಸ್ವಾಮಿ, ತಹಸೀಲ್ದಾರ್ ಎನ್.ಜೆ. ನಾಗರಾಜ್, ಸಿಪಿಐ ಲಿಂಗನಗೌಡ ನೆಗಳೂರು, ಬಿಇಒ ಎಲ್. ಜಯಪ್ಪ, ಮಾನವ ಹಕ್ಕುಗಳ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಕೆ.ಜಿ. ಮಂಜುನಾಥ್, ತಾಲೂಕು ಅಧ್ಯಕ್ಷ ಸಿ.ಆರ್. ನಾಗೇಂದ್ರಪ್ಪ, ಗ್ರಾಪಂ ಅಧ್ಯಕ್ಷೆ ರೇಣುಕಾ ಮೂರ್ತಪ್ಪ, ಉಪಾಧ್ಯಕ್ಷೆ ಮೀನಾಕ್ಷಮ್ಮ ಕರಿಯಪ್ಪ, ವಕೀಲ ಎಂ. ರಾಜಪ್ಪ, ಮಲ್ಲಯ್ಯ, ಕೆ.ಜಿ. ಶೈಲೇಶ್ ಪಾಟೀಲ್, ಸುಧಾಕರ್, ಗಂಗಾಧರಯ್ಯ, ಕೆ. ಬಸವರಾಜ್, ದೊಡ್ಡಬಾಯಿ ಸುರೇಶ್, ನಂಜಯ್ಯ ಕುಮಾರ್ ಇದ್ದರು.