ಜಿಲ್ಲೆ

ಪಂಢರಾಪುರ ಕರ್ನಾಟಕಕ್ಕೆ ಸೇರಿದ್ದು: ಚೌಂಡರಸನ ಸಾಹಿತ್ಯದಲ್ಲಿ ಉಲ್ಲೇಖ

ಬೆಂಗಳೂರು: ಮಹಾರಾಷ್ಟ್ರದಲ್ಲಿರುವ ಪಂಢರಾಪುರ 13ನೇ ಶತಮಾನದಲ್ಲಿ ಕರ್ನಾಟಕದ ಭಾಗವಾಗಿತ್ತು ಮತ್ತು ಅಲ್ಲಿನ ಪಾಂಡುರಂಗವಿಠಲ ದೇವರನ್ನು ಪಂಢರೀ ಎಂದು ಕರೆಯಯಾಗುತ್ತಿತು ಎಂಬ ಅಂಶವನ್ನು ಆ ಕಾಲದ ಕವಿ ಚೌಂಡರಸನ ಸಾಹಿತ್ಯದಲ್ಲಿ ಕಾಣಬಹುದಾಗಿದೆ ಎಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ. ಎಲ್.ಜಿ. ಮೀರಾ ತಿಳಿಸಿದರು.

ಎನ್.ಆರ್. ಕಾಲನಿಯಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಭಾನುವಾರ ಡಾ. ಎಚ್.ಎ. ಸತ್ಯವತಿ ಅವರ ಸಂಶೋಧನಾ ಕೃತಿ ‘ಚೌಂಡರಸ-ಒಂದು ಅಧ್ಯಯನ ಜನಾರ್ಪಣೆ ಕಾರ್ಯಕ್ರಮ’ ಎಂಬ ಕೃತಿ ಬಿಡುಗಡೆಯಲ್ಲಿ ಅವರು ಮಾತನಾಡಿದರು.

ಚೌಂಡರಸನು 13ನೇ ಶತಮಾನದ ಮೊದಲ ಭಾಗದಲ್ಲಿ ಬರುವ ಕವಿಯಾಗಿದ್ದಾನೆ. ಸೊಲ್ಲಾಪುರ ಭಾಗದಲ್ಲಿ ನೆಲೆಸಿದ್ದನು. ದಾಸಶ್ರೇಷ್ಠರಾದ ಕನಕದಾಸ ಮತ್ತು ಸಾಹಿತಿ ಪು.ತಿ. ನರಸಿಂಹಾಚಾರ್ ಅವರ ಮೇಲೆ ಗಾಢವಾದ ಪ್ರಭಾವ ಬೀರಿರುವುದು ಸಾಹಿತ್ಯದಿಂದ ತಿಳಿದುಬಂದಿದೆ ಎಂದರು.

ಅವನ ಮೂರು ಕೃತಿಗಳಲ್ಲಿ ಬಾಣಾಸುರ ವಿಜಯಂ ಇಲ್ಲಿಯವರೆಗೆ ಲಭ್ಯವಾಗಿಲ್ಲ. ನಳಚಂದ್ರ ಮತ್ತು ಅಭಿನವ ದಶಕುಮಾರ ಚರಿತೆಯು ದೊರೆತಿದೆ. ಈ ಕೃತಿಗಳಲ್ಲಿ ಂಡರಾಪುರದ ಉಲ್ಲೇಖವಿದೆ. ಪಂಢರಾಪುರ ಕರ್ನಾಟಕದ್ದು ಮತ್ತು ಪಂಢರೀ ಕನ್ನಡದ ದೇವರು ಎಂದು ತಿಳಿಸಿಕೊಟ್ಟವನು ಮತ್ತು ನಳ ಚರಿತ್ರೆಯನ್ನು ಕನ್ನಡದಲ್ಲಿ ಮೊದಲು ಹೇಳಿದ್ದು ಚೌಂಡರಸ ಆಗಿದ್ದಾನೆ ಎಂದರು.

ಕಾರ್ಯಕ್ರಮದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ, ಗೌರವಾಧ್ಯಕ್ಷ ಡಾ. ಆರ್. ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

ಚೌಂಡರಸ ಕೃತಿಯು ದಾಂಪತ್ಯದ ವಿರಹದ ವೇದನೆಯನ್ನು ಅನುಭವಿಸುವ ಕೃತಿಯಾಗಿದೆ. ಈ ಕುರಿತು ಡಾ. ಸತ್ಯವತಿ ತಳಸ್ಪರ್ಶಿಯಾದ ಪ್ರೌಢ ಪ್ರಬಂಧವನ್ನು ರಚಿಸಿದ್ದಾರೆ. - ಡಾ. ಹಂಪ ನಾಗರಾಜಯ್ಯ, ಹಿರಿಯ ವಿದ್ವಾಂಸ