ಪಾಂಡವಪುರ : ತಾಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಮೂಡಲಪಾಯ ಯಕ್ಷಗಾನ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬೆಂಗಳೂರಿನ ಮೂಡಲಪಾಲ ಯಕ್ಷಗಾನ ಪರಿಷತ್, ಕಸಾಪ ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಂಡಿದ್ದು ವಿಶೇಷ.
ಕರ್ಣ -ಅರ್ಜುನರ ಕಾಳಗ ಪ್ರಸಂಗದಲ್ಲಿ ಕೃಷ್ಣನ ತಂತ್ರದಿಂದ ಕರ್ಣ ವೀರ ಮರಣವನ್ನಪ್ಪುವ ಸಂದರ್ಭದ ಅಭಿನಯ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ್ದು ಗಮನೀಯ. ಪೌರಾಣಿಕ ಪಾತ್ರಗಳಿಗೆ ಜೀವ-ಭಾವ ತುಂಬಿದ ಚಿಣ್ಣರು ಸಮಯೋಚಿತ, ಸ್ಪಷ್ಟ ಸಂಭಾಷಣೆ, ಚಲನೆ, ವೇದಿಕೆ ಸದ್ಬಳಕೆ ಇತ್ಯಾದಿಗಳಿಂದ ಅಮೋಘ ಪ್ರದರ್ಶನ ನೀಡಿ ರಂಗಾಭಿನಿಗಳಿಂದ ಸೈ ಎನ್ನಿಸಿಕೊಂಡರು. ಗ್ರಾಮೀಣ ಕಲೆ ಉಳಿಸಿ: ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ ಗೌಡ, ಮೂಡಲಪಾಯ ಯಕ್ಷಗಾನ ಕಲೆ ನಶಿಸಿಹೋಗುತ್ತಿದೆ. ಗ್ರಾಮೀಣ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು. ಮೂಡಲಪಾಯ ಯಕ್ಷಗಾನ ಕಲೆ ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ಹುಟ್ಟಿತ್ತು. ಮೂಡಲಪಾಯವು ಕರಾವಳಿ ಯಕ್ಷಗಾನ ಕಲೆಗಿಂತ ಭಿನ್ನತೆ ಪಡೆದುಕೊಂಡಿತ್ತು. ಕಲೆ ಹತ್ತಾರು ಜಿಲ್ಲೆಗಳಲ್ಲಿ ತನ್ನ ಛಾಪು ಮೂಡಿಸಿತ್ತು ಎಂದರು. ಯಕ್ಷಗಾನದಲ್ಲಿ ಮಾತುಗಾರಿಕೆ, ನೃತ್ಯವನ್ನು ಕಾಣಬಹುದು ಆದರೆ, ಮೂಡಲಪಾಯದಲ್ಲಿ ಸಂಭಾಷಣೆಯ ಸೊಗಸೇ ವಿಶೇಷ ಎಂದರು.
ಶ್ರದ್ಧಾಂಜಲಿ: ಇತ್ತೀಚೆಗೆ ನಿಧನರಾದ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.