ಪಾಂಡವಪುರ : ಪತ್ನಿ ಶೀಲ ಶಂಕಿಸಿ ಗುಂಡುಕಲ್ಲಿನಿಂದ ತಲೆ ಜಜ್ಜಿ ಹತ್ಯೆಮಾಡಿದ್ದ ಆರೋಪಿಗೆ ಶ್ರೀರಂಗಪಟ್ಟಣದ ಅಪರ ಮತ್ತು ಸತ್ರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪಾಂಡವಪುರ ಪಟ್ಟಣದ ಬೀರಶೆಟ್ಟಹಳ್ಳಿಯ ನಾರಾಯಣ (ಎಸ್ಕೇಪ್ ನಾರಾಯಣ) ಶಿಕ್ಷೆಗೊಳಗಾದ ಅಪರಾಧಿ.
2019ರ ಆ.7ರಂದು ಪತ್ನಿ ಮಂಗಳಾ ಅವರ ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸಿ ಜಗಳ ತೆಗೆದ ಈತ ತಲೆ ಮೇಲೆ ಒರಳು ಕಲ್ಲಿನ ಗುಂಡುಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ 2019ರ ಸೆ. 9ರಂದು ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ರವೀಂದ್ರ ಆರೋಪಿಯನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಶ್ರೀರಂಗಪಟ್ಟಣ ನ್ಯಾಯಾಲಯದ ನ್ಯಾಯಾಧೀಶ ಟಿ.ಗೋಪಾಲಕೃಷ್ಣ ರೈ, ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಎಂ.ಕೆ. ಪ್ರಫುಲ್ಲಾ ವಾದ ಮಂಡಿಸಿದ್ದರು.