ಜಿಲ್ಲೆ

ಲಕ್ಷ್ಮೀ ನರಸಿಂಹಸ್ವಾಮಿ ದೇಗುಲದಲ್ಲಿ ಪಂಚಗರುಡೋತ್ಸವ ಫೆ. 9ಕ್ಕೆ

ಮೈಸೂರು: ಪಂಚ ಗರುಡೋತ್ಸವ ಸೇವಾ ಸಮಿತಿಯಿಂದ ಫೆ.9ರಂದು ನಗರದಲ್ಲಿ ಪ್ರಥಮ ಬಾರಿಗೆ ಶ್ರೀಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಮಾರ್ಗದರ್ಶನದಲ್ಲಿ ಪಂಚಗರುಡೋತ್ಸವ ಸಂಭ್ರಮ ಜರುಗಲಿದೆ.
ನಗರದ ಕಾಳಿದಾಸ ರಸ್ತೆಯ ಶ್ರೀಯದುಗಿರಿ ಯತಿರಾಜ ಮಠ, ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪಂಚಗರುಡೋತ್ಸವ ಆಯೋಜಿಸಲಾಗಿದೆ ಎಂದು ಸಮಿತಿ ಸದಸ್ಯ ಎಸ್‌ವಿಎಲ್ ಆಚಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ, ಶ್ರೀನಿವಾಸ ದೇವಸ್ಥಾನ, ಪುಸ್ತಕಂ ಸಂತಾನ ವೇಣುಗೋಪಾಲಸ್ವಾಮಿ ದೇವಸ್ಥಾನ, ಆಂಡಾಳ್ ಮಂದಿರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಗರುಡ ವಾಹನ ಮೂರ್ತಿಗಳು ಇದರಲ್ಲಿ ಪಾಲ್ಗೊಳ್ಳಲಿವೆ ಎಂದರು.
ಅಂದು ಮಧ್ಯಾಹ್ನ 12.30ಕ್ಕೆ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಸಕ ಟಿ.ಎಸ್. ಶ್ರೀವತ್ಸ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಸುಕೃತಿ ವೆಂಕಟರಾಮನ್ ಅವರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಶಾಸಕ ಕೆ.ಹರೀಶ್‌ಗೌಡ, ಮಾಜಿ ಸಚಿವ ಎಸ್.ಎ.ರಾಮದಾಸ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ನಗರಪಾಲಿಕೆ ಮಾಜಿ ಸದಸ್ಯರಾದ ಭಾಗ್ಯಾ ಮಾದೇಶ್, ನಮ್ರತಾ ರಮೇಶ್, ನಗರ ಪೊಲೀಸ್ ಕಮಿಷನರ್ ಬಿ.ರಮೇಶ್ ಬಾನೋತ್ ಭಾಗವಹಿಸಲಿದ್ದಾರೆ ಎಂದರು.
ಸಂಜೆ 4.30 ರಿಂದ 5.30 ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಂತರ ಪಂಚ ಗರುಡೋತ್ಸವಕ್ಕೆ ಶ್ರೀಮದಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಗುವುದು. ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್, ಭಾಷ್ಯಂ ಸ್ವಾಮೀಜಿ, ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಉಪಸ್ಥಿತರಿರುವರು ರಂದು ತಿಳಿಸಿದರು.
ಸಮಿತಿ ಸದಸ್ಯರಾದ ಕೆ.ಆರ್.ಯೋಗಾನರಸಿಂಹನ್, ಪ್ರದೀಪ್, ಲಕ್ಷ್ಮೀಥಶ್, ವೀರರಾಗವ್, ನಾಗಮಣಿ ಸಂಪತ್ ಇತರರು ಇದ್ದರು.