ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕುಂದಾಪುರ ತಾಲೂಕಿನ ಅನೇಕ ಗ್ರಾಮಗಳ ಜೀವನಾಡಿಯಂತಿರುವ ಪಂಚಗಂಗಾವಳಿ ನದಿಯಲ್ಲಿ ಹೂಳು ತುಂಬಿದ್ದು, ಹಾಗೆ ಬಿಟ್ಟರೆ ಅನೇಕ ಪ್ರದೇಶಗಳಲ್ಲಿ ನೀರು ನುಗ್ಗುವ ಆತಂಕ ಉಂಟಾಗಿದೆ. ನದಿಯಲ್ಲಿ ಹೂಳು ತುಂಬಿರುವುದರಿಂದ ಮೀನುಗಾರಿಕೆ ಹಾಗೂ ಚಿಪ್ಪು ಸಂಗ್ರಹಕ್ಕೆ ದೋಣಿ ಕೊಂಡೊಯ್ಯುವುದೇ ಕಷ್ಟವಾಗಿದೆ. ಹೂಳು ತೆಗೆದರೆ ಇವೆಲ್ಲ ಸರಾಗವಾಗಲಿದ್ದು, ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ದೊರೆಯಲಿದೆ.
ನೂರಾರು ವರ್ಷಗಳಿಂದ ಗಂಗೊಳ್ಳಿ, ಕುಂದಾಪುರದ ಪರಿಸರ ಹಾಗೂ ಇತರರ ಪೂರ್ವಜರು ಈ ನದಿಯನ್ನು ಅವಲಂಬಿತರಾಗಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಸಾವಿರಾರು ಕುಟುಂಬಗಳ ಪಾಲಿಗೆ ಇದು ಜೀವನದಿ. ಮೀನುಗಾರಿಕೆ, ಚಿಪ್ಪು ಹೆಕ್ಕುವಂತದ್ದು, ಪಂಜರ ಮೀನು ಸಾಕಾಣೆ, ಪ್ರವಾಸಿಗರನ್ನು ಕರೆದೊಯ್ಯುವ ದೋಣಿ ಚಲಿಸುವಂತದ್ದು, ಪ್ರವಾಸೋದ್ಯಮ ಹೀಗೆ ಹಲವಾರು ಚಟುವಟಿಕೆಗಳು ನಡೆಯುತ್ತಿರುತ್ತದೆ. ಹೊಸ ಬಸ್ ನಿಲ್ದಾಣ ಸಮೀಪ ಸಂತೆ ನಡೆಯುತ್ತಿದ್ದಾಗ ದೋಣಿ ಮೂಲಕ ಗುಡ್ಡಮ್ಮಾಡಿ, ಕೊಲ್ಲೂರು ಭಾಗದಿಂದ ಕಾಯಿ, ಬೆಲ್ಲ ಮೊದಲಾದ ಸಾಮಗ್ರಿ ಸರಂಜಾಮು ತರುತ್ತಿದ್ದ ದಾಖಲೆಗಳಿವೆ. ಕೋರ್ಟ್ ಎದುರಿನ ಮೈದಾನದಲ್ಲಿ ಎತ್ತಿನಗಾಡಿಗಳು ನಿಲ್ಲುತ್ತಿದ್ದವು. ಗಂಗೊಳ್ಳಿ ಪ್ರಮುಖ ವಾಣಿಜ್ಯ ಬಂದರು ಪ್ರದೇಶವಾದುದರಿಂದ ಹೆಂಚು, ಉಪ್ಪು ಮೊದಲಾದವುಗಳು ದೊಡ್ಡ ದೊಡ್ಡ ಹಡಗುಗಳ (ಮಚ್ವೆ) ಮೂಲಕ ವಿದೇಶಗಳಿಗೆ ರಫ್ತಾಗುತ್ತಿರುವ ಬಗ್ಗೆ ಉಲ್ಲೇಖವಿದೆ.
ಈ ಹಿಂದೆ ಈ ನದಿ ಪಾತ್ರದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತ್ತಿತ್ತು. ಪರಿಣಾಮ ನದಿ ಪಾತ್ರದಲ್ಲಿ ಹೂಳು ಶೇಖರಣೆಯಾಗುತ್ತಿರಲಿಲ್ಲ. ನದಿ ಆಳವಾಗಿದ್ದು ದೋಣಿಗಳು ಸರಾಗವಾಗಿ ಚಲಿಸುತ್ತಿತ್ತು. ಇತ್ತೀಚಿಗೆ ಹೊಸ ಕಾನೂನಿನ ಪರಿಣಾಮ ಯಾವುದೇ ಮರಳುಗಾರಿಕೆ ನಡೆಯುತ್ತಿಲ್ಲ. ಜತೆಗೆ ಒಂದಷ್ಟು ಅಣೆಕಟ್ಟುಗಳ ನಿರ್ಮಾಣದ ಮೂಲಕ ನದಿಯಲ್ಲಿ ಸಹಜ ಹರಿವಿನ ನೀರಿನ ಕೊರತೆಯಾಗಿದೆ. ಮರಳು, ಹೂಳು ಶೇಖರಣೆಗೊಂಡು ನದಿ ಬತ್ತಿದ ರೀತಿಯಲ್ಲಿ ಕಾಣುವಂತೆ ತುಂಬಿದೆ. ಸಮುದ್ರದ ಭರತ ಇಳಿತ ಸಂದರ್ಭವಂತೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.
ಹೂಳು ತುಂಬಿದ ಕಾರಣ ಮಳೆಗಾಲದಲ್ಲಿ ಕೃತಕ ನೆರೆ ಬಂದು ತಗ್ಗುಪ್ರದೇಶದಲ್ಲಿ ಬದುಕುವ ಅನೇಕ ಗ್ರಾಮಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ನದಿ ಪಾತ್ರ ಹೂಳಿನಿಂದ ಮುಚ್ಚಿರುವುದರಿಂದ ದೋಣಿಗಳು ಯಾವುದೇ ದಿಕ್ಕಿನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ನೀರಿನ ಇಳಿತ ಕಾಲದಲ್ಲಿಯೂ ನದಿ ಮೈದಾನದಂತೆ ಮತ್ತು ಮರುಭೂಮಿಯಂತೆ ಗೋಚರಿಸುತ್ತದೆ. ಇಲ್ಲಿ ಕಾಂಡ್ಲಾ ಗಿಡಗಳನ್ನು ಬೆಳೆದಿದ್ದು, ಅರಣ್ಯ ಇಲಾಖೆ ತೆರವುಗೊಳಿಸಲು ಬಿಡುತ್ತಿಲ್ಲ. ಕಾಂಡ್ಲಾವನ ಸೃಷ್ಟಿಯಾದರೆ ಪಂಚಗಂಗಾವಳಿ ನದಿ ಇತಿಹಾಸ ಪುಟ ಸೇರಲಿದೆ ಎಂಬ ಆತಂಕ ಜನರದ್ದು. ಬಡ ಮೀನುಗಾರರ ಜೀವನ ಸಂಕಷ್ಟಕ್ಕೀಡಾಗಿದೆ. ಪ್ರವಾಸೋದ್ಯಮ ಅವಕಾಶಗಳು ಕುಂಠಿತವಾಗಿವೆ. ಕುಂದಾಪುರದಿಂದ ಗಂಗೊಳ್ಳಿಗೆ ದೋಣಿ ಚಲನೆ ಸ್ತಬ್ಧವಾಗಿದೆ.
ತುಂಬಿದ ಹೂಳನ್ನು ನದಿಯಿಂದ ತೆಗೆದರೆ ನದಿ ಅವಲಂಬಿತರ ಬದುಕು ಹಸನಾಗಲಿದೆ. ಪ್ರವಾಸೋದ್ಯಮ ಸಲುವಾಗಿ ಕುಂದಾಪುರದಿಂದ ಗಂಗೊಳ್ಳಿ, ಬಬ್ಬುಕುದ್ರು, ಬಸ್ರೂರು, ಕೋಡಿ ಮೊದಲಾದೆಡೆಗೆ ದೋಣಿ ಯಾನ ನಡೆಸಬಹುದು. ಬೋಟ್ ಹೌಸ್ ಮಾದರಿಯ ಪ್ರವಾಸಿಗರ ಆಕರ್ಷಣೆಗೆ ಉತ್ತೇಜನ ನೀಡಬಹುದು. ಉತ್ತರಕನ್ನಡ ಮಾದರಿಯಲ್ಲಿ ಕಾಂಡ್ಲಾವನ ಪ್ರವಾಸವೂ ನಡೆಸಬಹುದು. ಪಂಜರ ಮೀನುಗಾರಿಕೆಗೆ ಸಹಾಯವಾಗಲಿದೆ. ಮೀನುಗಾರಿಕೆ ಹಾಗೂ ಚಿಪ್ಪು ಸಂಗ್ರಹದ ದೋಣಿಗಳ ಓಡಾಟ ಸಲೀಸಾಗಲಿದೆ. ಮುಖ್ಯವಾಗಿ ನಗರಕ್ಕೆ ನೆರೆ ಬರುವುದನ್ನು ತಪ್ಪಿಸಬಹುದು.
ಪಂಚಗಂಗಾವಳಿ ಹೂಳು ತೆಗೆಯುವ ಅವಶ್ಯವಿದೆ. ನದಿ ಬತ್ತಿದಂತೆ ಕಾಣುತ್ತದೆ. ಇದು ಸರ್ಕಾರದ ಹಂತದಲ್ಲಿ ತೀರ್ಮಾನ ಆಗಬೇಕಾದ ಕಾರಣ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು.-ರಶ್ಮಿ ಎಸ್.ಆರ್. ಸಹಾಯಕ ಕಮಿಷನರ್, ಕುಂದಾಪುರ
ಮೀನುಗಾರಿಕೆ, ಚಿಪ್ಪುಸಂಗ್ರಹ, ತಗ್ಗು ಪ್ರದೇಶಗಳಲ್ಲಿನ ನೆರೆ ಭೀತಿ ಹೋಗಲಾಡಿಸುವುದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ಅನೇಕ ಕಾರಣಗಳಿಗಾಗಿ ಪಂಚಗಂಗಾವಳಿಯ ಹೂಳು ತೆಗೆಯುವ ಅಗತ್ಯವಿದೆ.-ಅಭಿನಂದನ್ ಶೆಟ್ಟಿ ಉದ್ಯಮಿ, ಕುಂದಾಪುರ