ಜಿಲ್ಲೆ

ಖಾಲಿ ಹುದ್ದೆಗಳಲ್ಲಿ ಪಂಚಾಯಿತಿ ಕಾರ್ಯಭಾರ

*ಅಧಿಕಾರಿಗಳ ಕೊರತೆಯಿಂದ ಅಭಿವೃದ್ಧಿ ಕುಂಠಿತ

*ಚನ್ನಪಟ್ಟಣ ಗ್ರಾಪಂಗಳಿಗೆ ಪಿಡಿಒ, ಎಸ್‌ಡಿಎ, ಕಾರ್ಯದರ್ಶಿಗಳ ಹುದ್ದೆ ಖಾಲಿ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಗ್ರಾಮಗಳ ಅಭಿವೃದ್ಧಿಯಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯಾದ ಗ್ರಾಮ ಪಂಚಾಯಿತಿ ಪಾತ್ರ ಪ್ರಮುಖವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಗ್ರಾಪಂಮಟ್ಟದಲ್ಲಿ ಅನುಷ್ಠಾನಗೊಂಡರೆ ಮಾತ್ರ ಅದು ಸಾರ್ವಜನಿಕರಿಗೆ ತಲುಪುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸೇವೆಯಲ್ಲಿ ಗ್ರಾಪಂ ಅಧಿಕಾರಿಗಳ ಪಾತ್ರ ಮಹತ್ತರವಾಗಿದೆ. ಆದರೆ, ಇಂತಹ ಜವಾಬ್ದಾರಿಯುಳ್ಳ ಹುದ್ದೆಗಳೇ ಖಾಲಿಯಾಗಿದ್ದರೆ, ಗ್ರಾಮಾಡಳಿತದ ಗತಿಯೇನು ಎಂಬ ಪ್ರಶ್ನೆ ಮೂಡಿದೆ.

ಗ್ರಾಮ ಪಂಚಾಯಿತಿಯ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮತ್ತು ನಿರ್ಣಯಿಸಲು ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಜತೆ ಪಿಡಿಒಗಳು ಅತ್ಯಗತ್ಯ. ಆದರೆ, ಚನ್ನಪಟ್ಟಣ ತಾಲೂಕಿನ ಹಲವು ಗ್ರಾಪಂಗಳಲ್ಲಿ ಪಿಡಿಒ ಹಾಗೂ ಕಾರ್ಯದರ್ಶಿಗಳ ಹುದ್ದೆ ಬಹುದಿನಗಳಿಂದ ಖಾಲಿ ಉಳಿದಿದ್ದು, ಸ್ಥಳೀಯ ಆಡಳಿತ ವ್ಯವಸ್ಥೆ ಹಳಿ ತಪ್ಪಲು ಕಾರಣವಾಗಿದೆ. ಗ್ರಾಪಂನಲ್ಲಿ ಅಧಿಕಾರಿಗಳು ಲಭ್ಯವಿಲ್ಲದ ಕಾರಣ ಜನಪ್ರತಿನಿಧಿಗಳು ಜನರ ಕೈಯಲ್ಲಿ ಹಿಡಿಶಾಪ ಹಾಕಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಎಲ್ಲೆಲ್ಲಿ ಖಾಲಿ?

ತಾಲೂಕಿನಲ್ಲಿರುವ 32 ಗ್ರಾಪಂಗಳ ಪೈಕಿ ದಶವಾರ, ಇಗ್ಗಲೂರು, ಎಂ.ಬಿ.ಹಳ್ಳಿ, ನಾಗವಾರ ಹಾಗೂ ಮಳೂರು ಗ್ರಾಪಂಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆ ಖಾಲಿ ಇದೆ. ತಗಚಗೆರೆ ಹಾಗೂ ಬೇವೂರು ಗ್ರಾಪಂಗಳಲ್ಲಿ ಗ್ರೇಡ್ -1 ಕಾರ್ಯದರ್ಶಿ ಹುದ್ದೆ ಖಾಲಿಯಿದ್ದರೆ, ತಾಲೂಕಿನ ಅಕ್ಕೂರು, ಬಿ.ವಿ.ಹಳ್ಳಿ, ಚಕ್ಕೆರೆ, ದಶವಾರ, ಎಚ್.ಬ್ಯಾಡರಹಳ್ಳಿ, ಹಾರೋಕೊಪ್ಪ, ಮತ್ತೀಕೆರೆ, ಸಿಂಗರಾಜಿಪುರ, ಸೋಗಾಲ ಹಾಗೂ ತಿಟ್ಟಮಾರನಹಳ್ಳಿ ಗ್ರಾಪಂ ಗಳಲ್ಲಿ ಗ್ರೇಡ್- 2 ಕಾರ್ಯದರ್ಶಿ ಹುದ್ದೆ ಖಾಲಿ ಉಳಿದಿವೆ. ಪಿಡಿಒ ಇದ್ದರೆ, ಕಾರ್ಯದರ್ಶಿ ಇಲ್ಲ, ಕಾರ್ಯದರ್ಶಿ ಇದ್ದರೆ ಪಿಡಿಒ ಇಲ್ಲ ಎಂಬ ಸ್ಥಿತಿ ಹಲವು ಗ್ರಾಪಂಗಳಲ್ಲಿದೆ.

ಸಮಸ್ಯೆ ಸೃಷ್ಟಿ!

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಇಲ್ಲದೇ ಪಂಚಾಯಿತಿ ವ್ಯಾಪ್ತಿಯ ಕೆಲಸ ಕಾರ್ಯಗಳು ಅಯೋಮಯವಾಗಿವೆ. ಕೆಲ ಪಂಚಾಯಿತಿಗಳಲ್ಲಿ ಪಿಡಿಒ ಇಲ್ಲದ ಕಾರಣ, ಒಬ್ಬೊಬ್ಬರಿಗೆ ಎರಡು ಅಥವಾ ಮೂರು ಕಡೆ ಜವಾಬ್ದಾರಿ ನೀಡಲಾಗುತ್ತಿದೆ. ಒಬ್ಬ ಪಿಡಿಒ ವಾರದಲ್ಲಿ ಮೂರು ದಿನ ಒಂದು ಗ್ರಾಪಂ, ಇನ್ನುಳಿದ ಮೂರು ದಿನ ಮತ್ತೊಂದು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿದೆ. ಇದು ಗ್ರಾಮಾಡಳಿತ ವ್ಯವಸ್ಥೆ ಹಳಿ ತಪ್ಪಲು ಕಾರಣವಾಗುತ್ತಿದೆ. ಕೇವಲ ಪಿಡಿಒ ಹುದ್ದೆ ಖಾಲಿ ಇರುವ ಪಂಚಾಯಿತಿಗಳಷ್ಟೇ ಅಲ್ಲದೇ, ಇತರ ಕಡೆ ನಿಯೋಜನೆಗೊಳ್ಳುವ ಕಾರಣ ಆ ಪಂಚಾಯಿತಿಗಳಲ್ಲೂ ಸಮಸ್ಯೆಯಾಗುತ್ತಿದೆ.

ಅಧಿಕಾರಿಗಳಿಗೆ ಹೆಚ್ಚಾದ ಹೊರೆ?

ಪ್ರಸುತ್ತ ಗ್ರಾಪಂ ಅಧಿಕಾರಿಗಳಿಗೆ ಕೆಲಸದ ಒತ್ತಡವೂ ಹೆಚ್ಚಾಗಿದೆ. ಮಗುವಿನ ಜನನ ಪ್ರಮಾಣ ಪತ್ರ ನೀಡುವುದರಿಂದ ಹಿಡಿದು ಆ ಮಗು ಶಾಲೆಗೆ ಹೋಗುತ್ತಿದೆಯೇ ಇಲ್ಲವೇ ಎಂಬ ಸಮೀಕ್ಷೆ ಮಾಡುವುದರ ಜತೆಗೆ, ಮರಣ ಪ್ರಮಾಣಪತ್ರ ನೀಡುವ ಜವಾಬ್ದಾರಿ ಇದೆ. ಕಂದಾಯ ಇಲಾಖೆಯ ಕೆಲಸವನ್ನು ಪಂಚಾಯಿತಿಗಳು ಮಾಡಬೇಕಾದ ಅನಿವಾರ್ಯತೆ ಇದೆ. ಇದರೊಂದಿಗೆ, ನರೇಗಾ, ಖಾತೆ, ಮೂಲ ಸೌಕರ್ಯ ಒದಗಿಸುವುದು ಸೇರಿ ಹಲವು ಜವಾಬ್ದಾರಿಗಳು ಗ್ರಾಪಂ ಹೆಗಲಿಗಿವೆ. ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಾಲೂಕಿನಲ್ಲಿ ನಡೆಸಿದ ಜನಸ್ಪಂದನ ಸಭೆಯ ಅರ್ಜಿಗಳನ್ನು ವಿಲೇವಾರಿ ಮಾಡುವ ಒತ್ತಡವೂ ಇವರ ಮೇಲೆಯೇ ಇದೆ. ಪ್ರಸ್ತುತ ಜವಾಬ್ದಾರಿಯ ಹೊರೆಗಳು ಹೆಚ್ಚಾಗಿ ಪಿಡಿಒಗಳು ಬಳಲಿ ಬೆಂಡಾಗುತ್ತಿದ್ದಾರೆ. ಇದರ ನಡುವೆ ಸಿಬ್ಬಂದಿ ಕೊರತೆಯೂ ಇವರನ್ನು ಕಾಡುತ್ತಿರುವುದು ವಿಪರ್ಯಾಸ.

ಇದು ಕೇವಲ ತಾಲೂಕಿನ ಸಮಸ್ಯೆಯಲ್ಲ, ಇಡೀ ಜಿಲ್ಲೆಯಲ್ಲಿ ಈ ಸಮಸ್ಯೆ ತಲೆದೂರಿದೆ. ರಾಜ್ಯಸರ್ಕಾರ ಸಿಬ್ಬಂದಿ ಕೊರತೆ ನೀಗಿಸಿ, ಗ್ರಾಮಾಡಳಿತಕ್ಕೆ ಶಕ್ತಿ ತುಂಬಬೇಕಿದೆ.

ನಮ್ಮ ಗ್ರಾಪಂನಲ್ಲಿ ಪಿಡಿಒ, ಕಾರ್ಯದರ್ಶಿ ಹಾಗೂ ಎಸ್‌ಡಿಎಎ ಮೂವರು ಇಲ್ಲ. ಇದರಿಂದ ಪಂಚಾಯಿತಿ ಆಡಳಿತ ನಡೆಸುವುದೇ ಕಷ್ಟಸಾಧ್ಯವಾಗಿದೆ. ಗ್ರಾಮಸ್ಥರು ಕೆಲಸಕಾರ್ಯಗಳ ಬಗ್ಗೆ ನಮ್ಮನ್ನು ಕೇಳುತ್ತಿದ್ದಾರೆ. ಉತ್ತರಿಸುವುದು ಸಮಸ್ಯೆಯಾಗುವ ಜತೆಗೆ ಇದು ನಮಗೂ ಮುಜುಗರದ ಪ್ರಶ್ನೆಯಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆ ಆದಷ್ಟು ಬೇಗ ಪರಿಹರಿಸಲಿ.ಇ.ತಿ.ಶ್ರೀನಿವಾಸ್, ಇಗ್ಗಲೂರು ಗ್ರಾಪಂ ಅಧ್ಯಕ್ಷ

ಗ್ರಾಮಮಟ್ಟದ ಪ್ರಮುಖ ಅನುಷ್ಠಾನದ ಅಧಿಕಾರಿಗಳಾದ ಪಿಡಿಒ ಮತ್ತು ಕಾರ್ಯದರ್ಶಿಗಳಿಲ್ಲದೆ ಕೆಲ ಗ್ರಾಪಂಗಳಲ್ಲಿ ಸಾರ್ವಜನಿಕರ ದಿನನಿತ್ಯದ ಕೆಲಸ ಕಾರ್ಯಗಳು ಕುಂಠಿತವಾಗಿರುವುದು ಸತ್ಯ. ನಿವೃತ್ತಿ ಹಾಗೂ ವರ್ಗಾವಣೆಯ ಕಾರಣದಿಂದ ಪಿಡಿಒ ಹಾಗೂ ಕಾರ್ಯದರ್ಶಿಗಳ ಹುದ್ದೆ ಕೆಲವೆಡೆ ಖಾಲಿಯಾಗಿವೆ. ಸರ್ಕಾರದ ಮಟ್ಟದಲ್ಲಿ ನೇಮಕಾತಿ ಹಾಗೂ ಪದೋನ್ನತಿ ಪ್ರಕ್ರಿಯೆ ನಡೆದರೆ ಸಮಸ್ಯೆ ಬಗೆಹರಿಯಲಿದೆ. ಹೆಸರು ಹೇಳಲು ಇಚ್ಛಿಸದ ಅಧಿಕಾರಿ