ಜಿಲ್ಲೆ

ಸಮಸ್ಯೆ ಪರಿಹಾರಕ್ಕೆ ಪಂಚಾಯಿತಿ ಕಟ್ಟೆ ಸಹಕಾರಿ

ಜಿ.ಹೆಚ್. ಧನ್ಯಕುಮಾರ್

ಲಿಂಗದಹಳ್ಳಿ : ಸಾರ್ವಜನಿಕರ ಕುಂದು ಕೊರತೆಗಳನ್ನು ಸ್ಥಳೀಯವಾಗಿಯೇ ಬಗೆಹರಿಸುವ ಉದ್ದೇಶದಿಂದ ಪಂಚಾಯಿತಿ ಕಟ್ಟೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನಾ ಹೇಳಿದರು.

ಲಿಂಗದಹಳ್ಳಿ ಹೋಬಳಿ, ಉಡೇವಾ ಗ್ರಾಪಂ ವ್ಯಾಪ್ತಿಯ ಹೊಸ ಗಂಗೂರು ಗ್ರಾಮದಲ್ಲಿ ತರೀಕೆರೆ ತಾಲೂಕು ಪಂಚಾಯಿತಿ, ಉಡೇವಾ ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ ಪಂಚಾಯಿತಿ ಕಟ್ಟೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಗಮನಕ್ಕೆ ತರುವ ಉದ್ದೇಶದಿಂದ ಹಣ ಮತ್ತು ಸಮಯ ವ್ಯರ್ಥ ಮಾಡಿಕೊಂಡು ದೂರದ ಚಿಕ್ಕಮಗಳೂರಿಗೆ ಬರುವುದನ್ನು ತಪ್ಪಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ನಿವೇಶನ ಮತ್ತು ಮನೆ ಇಲ್ಲದ ಅರ್ಹ ಫಲಾನುಭವಿಗಳು ತಮ್ಮ ತಮ್ಮ ವ್ಯಾಪ್ತಿಯ ಪಂಚಾಯಿತಿ ಕಾರ್ಯಾಲಯಗಳಿಗೆ ಸೂಕ್ತ ದಾಖಲೆ ನೀಡಬೇಕು. ಈಗಾಗಲೇ ಮಂಜೂರಾಗಿರುವ ಮನೆಗಳನ್ನು ಸೂಕ್ತ ಸಮಯದಲ್ಲಿ ನಿರ್ಮಿಸಿಕೊಳ್ಳದಿದ್ದರೆ ಅದೇ ಫಲಾನುಭವಿಗೆ ಮತ್ತೊಮ್ಮೆ ಮನೆ ಮಂಜೂರು ಮಾಡಲು ಸಾಧ್ಯವಿರುವುದಿಲ್ಲ ಎಂದು ತಿಳಿಸಿದರು.

ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬೇರೆ ಇಲಾಖೆಗಳಿಂದ ದೊರಕುವ ಸಹಾಯ ಧನದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ನಯನಾ, ಸಿಪಿಒ ರಾಜಗೋಪಾಲ್, ತರೀಕೆರೆ ಇಒ ಆರ್.ದೇವೇಂದ್ರಪ್ಪ, ಸಹಾಯಕ ನಿರ್ದೇಶಕರಾದ ಯೋಗೀಶ್, ಗ್ರಾಪಂ ಅಧ್ಯಕ್ಷೆ ಭಾರತಿ ರಾಜಪ್ಪ, ಗ್ರಾಪಂ ಸದಸ್ಯರಾದ ಉಮೇಶ್, ಲಕ್ಷ್ಮೀ, ಪಿಡಿಒ ಬಿ.ಮಂಜು ಇದ್ದರು.