ಜಿಲ್ಲೆ

ಗ್ರಾಮದ ಅಭಿವೃದ್ಧಿಗೆ ಪಂಚಾಯಿತಿ ಕಟ್ಟೆ ಸೂಕ್ತ ವೇದಿಕೆ

ಪಂಚನಹಳ್ಳಿ: ಗ್ರಾಮೀಣ ಭಾಗದಲ್ಲಿ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಚರ್ಚೆ ನಡೆಸಲು ಪಂಚಾಯಿತಿ ಕಟ್ಟೆ ಸೂಕ್ತ ವೇದಿಕೆಯಾಗಿದೆ ಎಂದು ಅಣ್ಣೀಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಡಿ.ಶಂಕರಪ್ಪ ಹೇಳಿದರು.

ಅಣ್ಣೀಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾತೇನಹಳ್ಳಿ ಗ್ರಾಮದಲ್ಲಿ ನಡೆದ ಪಂಚಾಯಿತಿ ಕಟ್ಟೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಾತೇನಹಳ್ಳಿ ಗ್ರಾಮದಲ್ಲಿ ಬಹುಮುಖ್ಯವಾಗಿ ಶುದ್ಧ ಕುಡಿಯುವ ನೀರಿನ ಘಟಕ, ಅಂಗನವಾಡಿ ಕೇಂದ್ರದ ಅಗತ್ಯವಿದೆ. ಈ ಎರಡೂ ಕಾರ್ಯಗಳನ್ನು ಆದ್ಯತೆ ಮೇರೆಗೆ ಮಾಡಬೇಕಿದ್ದು, ಜಾಗದ ಕೊರತೆ ಇದೆ ಎಂದರು.

ಯಾರಿಗೂ ತೊಂದರೆಯಾಗದಂತೆ ಜಾಗ ಗುರುತಿಸಿದರೆ ಶುದ್ಧ ಕುಡಿಯುವ ನೀರಿನ ಘಟಕದ ಕಾರ್ಯವನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬಹುದು. ಅಂಗನವಾಡಿ ಕೇಂದ್ರದ ಅಗತ್ಯತೆ ಬಗ್ಗೆ ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಅನುದಾನ ಕುರಿತು ಶಾಸಕರ ಜತೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ನೋಡಲ್ ಅಧಿಕಾರಿ ಶ್ರೀವಳ್ಳಿ, ಪಿಡಿಒ ನವೀನ್ ಕುಮಾರ್, ಸದಸ್ಯರಾದ ತಮ್ಮಯ್ಯ, ಪ್ರೇಮಾ, ಮಲ್ಲಿಕಾರ್ಜುನ, ಚಂದ್ರಮ್ಮ, ಪಿ.ಎಂ.ಚೌಡಪ್ಪ, ಶೇಖರಪ್ಪ,ಪಿ.ಎನ್.ದೇವರಾಜ್ ಮತ್ತು ಗ್ರಾಮಸ್ಥರು ಇದ್ದರು.