ವಿಜಯವಾಣಿ ಸುದ್ದಿಜಾಲ ಕೋಟ(ಉಡುಪಿ)
ಕೋಟದ ಪಂಚವರ್ಣ ಯುವಕ ಮಂಡಲ, ಮಹಿಳಾ ಮಂಡಲ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಸದ್ಭಾವನಾ 2024ರ ನಾಡುನುಡಿಗೆ ಭಾವ ನಮನ ಕಾರ್ಯಕ್ರಮ ನ.16ರಂದು ಕೋಟದ ಗಾಂಧಿ ಮೈದಾನದಲ್ಲಿ ಜರುಗಲಿದೆ. ಕಾರ್ಯಕ್ರಮದಲ್ಲಿ ಉದ್ಯಮಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ವಿಜಯ ಸಂಕೇಶ್ವರ ಅವರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಲಾಗುವುದು.
ಕಾರ್ಕಳದ ಸ್ವಚ್ಛ ಬ್ರಿಗೇಡ್‌ಗೆ ವಿಶೇಷ ಪುರಸ್ಕಾರ, ಬೆಂಗಳೂರು ಯಕ್ಷಕಲಾ ಅಕಾಡೆಮಿ ಮುಖ್ಯಸ್ಥ ಕೃಷ್ಣಮೂರ್ತಿ ತುಂಗ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಗುವುದು. ಬಹುಮುಖ ಪ್ರತಿಭೆಗಳಾದ ಸುಶ್ಮಿತಾ ಕೃಷ್ಣಮೂರ್ತಿ ಸಾಲಿಗ್ರಾಮ, ಪ್ರಜ್ಞಾ ಗೀತಾ ಪೂಜಾರಿ ಪ್ರತಿಭಾ ಪುರಸ್ಕಾರ ಪಡೆಯಲಿದ್ದಾರೆ.
ಸಂಸ್ಥೆ ಮಾಜಿ ಅಧ್ಯಕ್ಷ ದಿ.ಉದಯ ಪೂಜಾರಿ ಸ್ಮರಣಾರ್ಥ ಉಡುಪಿ ಹೊಸಬದುಕು ಆಶ್ರಮಕ್ಕೆ ದಿನಸಿ ಪರಿಕರ, ಅನಾರೋಗ್ಯ ಪೀಡಿತರಿಗೆ, ಅಂಗವಿಕಲರಿಗೆ ಸಹಾಯಹಸ್ತ ನೀಡಲಾಗುವುದು. ಸ್ಥಳೀಯ ಕನ್ನಡ ಮಾಧ್ಯಮ ಶಾಲೆಗಳಿಗೆ ದತ್ತಿನಿಧಿ, ಅಂಗನವಾಡಿ ಶಾಲೆಗಳಿಗೆ ವಿವಿಧ ಪರಿಕರ ಹಸ್ತಾಂತರ ನಡೆಯಲಿದೆ.
ಕನ್ನಡ ಚಿತ್ರರಂಗ ಹಿರಿಯ ನಟ ಎಸ್.ದೊಡ್ಡಣ್ಣ ಪಾಲ್ಗೊಳ್ಳಲಿದ್ದು, ಸಮಾಜಸೇವಕ ಆನಂದ್ ಸಿ.ಕುಂದರ್ ಕಾರ್ಯಕ್ರಮ ಉದ್ಘಾಟಿಸುವರು. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಮಾಜಸೇವಕ ಬನ್ನಾಡಿ ನಾರಾಯಣ ಆಚಾರ್ ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಕೋಟತಟ್ಟು, ಮಣೂರು, ಕಾಸನಗುಂದು ಅಂಗನವಾಡಿ ಪುಟಾಣಿಗಳಿಂದ ನೃತ್ಯ ಸಿಂಚನ, ಪಂಚವರ್ಣ ಮಹಿಳಾ ಮಂಡಲ ಮಹಿಳೆಯರಿಂದ ಹಾಗೂ ಕುಂಭಾಶಿಯ ಮಯೂರಿ ನೃತ್ಯ ತಂಡದಿಂದ ಸಾಂಸ್ಕೃತಿಕ ಕಲರವ, ರಾತ್ರಿ 9ಕ್ಕೆ ಪಿಂಗಾರ ಕಲಾವಿದರ್ ಬಿದ್ರೆ ಅವರಿಂದ ಕದಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪಂಚವರ್ಣ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಅಜಿತ್ ಅಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.