ಬೆಂಗಳೂರು: ಪಂಚತಂತ್ರ ಕಥೆಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಮುಖ್ಯವಾಗಿ ಸಾಮಾಜಿಕ ಪ್ರಜ್ಞೆ ಬೆಳೆಯುತ್ತದೆ ಎಂದು ವಿಭು ಅಕಾಡೆಮಿ ಸಂಸ್ಥಾಪಕಿ ಡಾ.ವಿ.ಬಿ.ಆರತಿ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರ ಆಯೋಜಿಸಿದ್ದ 'ಪ್ರೌಢಶಾಲಾ ಮಕ್ಕಳಿಗಾಗಿ ಪಂಚತಂತ್ರ ಕಥೆ ಹೇಳುವ ಸ್ಪರ್ಧೆ' ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ನಾವಿಂದು ಮೆಕಾಲೆ ಪದ್ಧತಿಯ ಶಿಕ್ಷಣ ಪಡೆಯುತ್ತಿದ್ದೇವೆ. ಪರಿಣಾಮ ಗುಲಾಮಿ ಮನಸ್ಥಿತಿಯಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಭಾರತೀಯ ಶಿಕ್ಷಣ ಪದ್ದತಿ ಕಥೆಯಿಂದಲೇ ಆರಂಭವಾಗಿ ಕಥೆಯಿಂದಲೇ ಮುಕ್ತಾಯವಾಗುತ್ತಿತ್ತು. ವೇದ, ಮಹಾಭಾರತ, ರಾಮಾಯಣ, ಪಂಚತಂತ್ರದ ಕಥೆಗಳ ಮೂಲಕ ರಾಜನೀತಿ, ಸಾಮಾಜಿಕ ನೀತಿ, ಬೆಳೆಸಲಾಗುತ್ತಿತ್ತು. ಮರೆಯಾಗಿರುವ ಈ ಶಿಕ್ಷಣ ಕ್ರಮವನ್ನು ಮತ್ತೆ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
'ವಸುಧೈವ ಕುಟುಂಬಕಮ್' ಎಂಬುದು ಪಂಚತಂತ್ರದಲ್ಲಿ ನರಿ ಹೇಳುವ ಮಾತು. ತನ್ನ ಎದುರಿನ ಪ್ರಾಣಿಯನ್ನು ಮೋಸಗೊಳಿಸಲು ಕುಟಿಲತೆಯಿಂದ ಅದು ಆ ಮಾತನ್ನು ಹೇಳುತ್ತದೆ. ಆದರೆ ಆ ಸಂದರ್ಭವನ್ನು ಅರ್ಥ ಮಾಡಿಕೊಳ್ಳದೆ ಇಡೀ ಜಗತ್ತೇ ಒಂದು ಕುಟುಂಬ ಎಂದು ನಂಬಿ ಮೋಸ ಹೋಗುತ್ತೇವೆ. ಕೇಂದ್ರ ಸರ್ಕಾರ ಕೂಡ ಅದನ್ನು ಘೋಷವಾಕ್ಯವೆಂದು ಪರಿಗಣಿಸಿದೆ. ಆದರೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬ ಸ್ವಂತ ಪ್ರೆಯನ್ನು ನಮ್ಮ ವೇದ, ಉಪನಿಷತ್ತು, ಭಗವದ್ಗೀತೆಗಳು ತಿಳಿಸುತ್ತವೆ. ಅದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ನಮ್ಮ ದೇಶದ ಸಂಸತಿಗೆ ನಾವು ರಾಯಭಾರಿಗಳಾಗಬೇಕು. ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕು. ಇಂದು ಸಣ್ಣ ಸಣ್ಣ ಕಾರಣಗಳಿಗಾಗಿ ಆತ್ಮಹತ್ಯೆ ಹೆಚ್ಚುತ್ತಿದೆ. ಯುವಜನರು ದುರ್ಬಲ ಮನ@ಸ್ಥಿತಿಗೆ ಜಾರುತ್ತಿದ್ದಾರೆ. ಪಂಚತಂತ್ರದಂತಹ ಪ್ರಾಚಿನ ಗ್ರಂಥಗಳಲ್ಲಿ ವ್ಯಕ್ತಿನಿರ್ಮಾಣಕ್ಕೆ ಬೇಕಾದ ಮೌಲ್ಯಗಳಿವೆ. ವಿದ್ಯಾರ್ಥಿಗಳು ಕೇವಲ ಸ್ಪರ್ಧೆಗೆ ಪಂಚತಂತ್ರದ ಕಥೆಗಳನ್ನು ಸೀಮಿತಗೊಳಿಸಬಾರದು. ಅದರಲ್ಲಿರುವ ಮೌಲ್ಯಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಉದ್ಯಮಿ, ಜಸ್ಟ್ ಬುಕ್ಸ್ ಮಾಲೀಕ ಸುರೇಶ್ ನರಸಿಂಹ ಮಾತನಾಡಿ, ಮಕ್ಕಳಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿರುವುದಕ್ಕೆ ಪೋಷಕರೇ ಹೊಣೆಗಾರರು. ಪೋಷಕರು ಎಲ್ಲಿಯವರೆಗೆ ಮಕ್ಕಳಿಗೆ ನಮ್ಮ ಧರ್ಮ, ಸಂಸತಿ, ಭಾಷೆ, ಸಾಹಿತ್ಯಗಳ ಪರಿಚಯ ಮಾಡಿಕೊಡುವುದಿಲ್ಲವೋ, ಅಲ್ಲಿಯವರೆಗೆ ಈ ಸಮಸ್ಯೆ ಪರಿಹಾರವಾಗುವುದಿಲ್ಲ. ಜೀವನದಲ್ಲಿ ಅಂಕದ ಜೊತೆಜೊತೆಗೇ ಮೌಲ್ಯಗಳೂ ಮುಖ್ಯ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು ಎಂದರು.
ಅಭಾಸಾಪ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಡಾ.ಎ.ಭಾನು, ಹಿರಿಯ ಪತ್ರಕರ್ತ ಡಿ.ಎಂ.ಘನಶ್ಯಾಮ್, ಅಭಾಸಾಪ ಬೆಂಗಳೂರು ಮಹಾನಗರ ಸಂಯೋಜಕ ಚಂದ್ರಶೇಖರ್ ಇತರರಿದ್ದರು.