ಆರ್.ತುಳಸಿಕುಮಾರ್
ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಂತೆ ಅಭಿವೃದ್ಧಿ ಅಜೆಂಡ್ ಬದಲು ಮುಂದಿನ ಎಲೆಕ್ಷನ್‌ನಲ್ಲಿ ಆಡಳಿತರೂಢ ಕಾಂಗ್ರೆಸ್ ಗೆಲ್ಲಿಸಲೆಂದೇ ಐದು ಪಾಲಿಕೆಗಳನ್ನು ರಚಿಸಲಾಗಿದೆ. ಅವೈಜ್ಞಾನಿಕವಾಗಿ ಮಾಡಿರುವ ಈ ವಿಭಜನೆಯು ರಾಜಧಾನಿ ಅಭಿವೃದ್ಧಿ ಹಾಗೂ ಕನ್ನಡಿಗರ ಒಗ್ಗಟ್ಟಿಗೆ ಹಿನ್ನಡೆ ಆಗಲಿದೆ ಎಂಬ ಆಕ್ಷೇಪ ಕೇಳಿಬಂದಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಬಿಬಿಎಂಪಿ ಪ್ರದೇಶವನ್ನು ಆಡಳಿತ ದೃಷ್ಟಿಯಿಂದ ಸಣ್ಣ ಪಾಲಿಕೆ ಮಾಡಿರುವುದು ಸರಿ ಇದೆ. ಆದರೆ, ಹೊಸ ಕಾರ್ಪೊರೇಷನ್‌ಗಳನ್ನು ರಚಿಸಲು ಅನುಸರಿಸಿರುವ ಮಾನದಂಡ ಒಪ್ಪುವಂತಹದ್ದಲ್ಲ. ಐದೂ ಪಾಲಿಕೆಗಳ ವಿಸ್ತೀರ್ಣ, ಜನಸಂಖ್ಯೆ ಹಾಗೂ ಪ್ರದೇಶಗಳಲ್ಲಿ ಸಾಮ್ಯತೆ ಇರದೆ ವಿಭಿನ್ನವಾಗಿವೆ. ಇದು ರಾಜಕೀಯ ಉದ್ದೇಶವನ್ನು ಅಡಕಗೊಂಡಿದ್ದು, ಹೊಸ ಪಾಲಿಕೆಗಳು ಸಾರ್ವಜನಿಕರಿಗೆ ಉತ್ತಮ ಆಡಳಿತ ಅಥವಾ ಮೂಲಸೌಕರ್ಯ ಕಲ್ಪಿಸಲು ಸಹಕಾರಿಯಾಗದು ಎಂಬುದಾಗಿ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ಬಿಬಿಎಂಪಿಯನ್ನು ವಿಭಜಿಸುವ ವೇಳೆ ಹೊಸ ಪಾಲಿಕೆಗಳನ್ನು ಸಮಾನ ಅಭಿವೃದ್ಧಿ ಆಧರಿಸಿ ರಚಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ಒಪ್ಪಿಗೆ ನೀಡಿದ ವೇಳೆಯೂ ಇದೇ ಮಾತನ್ನು ಪ್ರತಿಪಾದಿಸಲಾಗಿತ್ತು. ಆದರೀಗ ಸರ್ಕಾರ ತನ್ನ ಮೂಗಿನ ನೇರಕ್ಕೆ ಪಂಚ ಪಾಲಿಕೆ ರಚಿಸಿ ಅವುಗಳಲ್ಲಿ ಅಧಿಕಾರ ಹಿಡಿಯಲು ಬೇಕಾದ ತಂತ್ರಗಾರಿಕೆಯ ಕರಡನ್ನು ಜನರ ಮುಂದಿಟ್ಟಿದೆ. ಮುಖ್ಯವಾಗಿ ಒಂದು ವಿಧಾನಸಭಾ ಕ್ಷೇತ್ರವನ್ನು ಒಂದೇ ಪಾಲಿಕೆ ವ್ಯಾಪ್ತಿಗೆ ಸೇರಿಸುವ ವಾಗ್ದಾನಕ್ಕೆ ಸರ್ಕಾರ ಬೆನ್ನು ತಿರುಗಿಸಿರುವುದು ಏಕೆ ಎಂಬ ಪ್ರಶ್ನೆ ಎದ್ದಿದೆ.
ಅಸೆಂಬ್ಲಿ ಕ್ಷೇತ್ರ ಒಗ್ಗೂಡಿಸುವಲ್ಲಿ ವೈಫಲ್ಯ:
ಐದು ಪಾಲಿಕೆ ರಚಿಸುವ ವೇಳೆ ಒಂದು ಅಸೆಂಬ್ಲಿ ಕ್ಷೇತ್ರವು ಒಂದೇ ಪಾಲಿಕೆ ವ್ಯಾಪ್ತಿಯಲ್ಲಿರಬೇಕಿತ್ತು. ಈ ಮೂಲ ಅಂಶವನ್ನು ಪಾಲಿಕೆ ರಚನಾ ಸಮಿತಿ ಮರೆತಂತಿದೆ. ಒಂದೆರಡು ದೊಡ್ಡ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳನ್ನು ಒಂದೇ ಕಾರ್ಪೊರೇಷನ್ ಅಡಿಯಲ್ಲಿ ತರಬಹುದಿತ್ತು. ಆದರೆ, ಯಾವೊಂದು ಪಾಲಿಕೆಯೂ ಪೂರ್ಣವಾಗಿ ಇಡೀ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿಲ್ಲ. ಕೇಂದ್ರ ಪಾಲಿಕೆ ಹೊರತುಪಡಿಸಿ ಉಳಿದವುಗಳಲ್ಲಿ ವಿಧಾನಸಭಾ ಕ್ಷೇತ್ರಗಳು ಇಬ್ಭಾಗಿಸಲಾಗಿದೆ. ಈ ಸಮಸ್ಯೆಯನ್ನೇ ಶಾಸಕರು ಮುಂದಿಟ್ಟುಕೊಂಡು ಪಾಲಿಕೆಗಳ ವಿಭಜನೆಯನ್ನು ವಿರೋಧಿಸುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 28 ಅಸೆಂಬ್ಲಿ ಕ್ಷೇತ್ರಗಳಿವೆ. ಇವುಗಳಲ್ಲಿ ಆನೇಕಲ್‌ನ ಕೂಡ್ಲು ವಾರ್ಡ್ ಮಾತ್ರ ಬಿಬಿಎಂಪಿಗೆ ಸೇರಿದ್ದರೂ, ಈಗ ಜಿಬಿಎಯಿಂದ ಕೈಬಿಡಲಾಗಿದೆ. ಬೆಂಗಳೂರು ಉತ್ತರ ಪಾಲಿಕೆಗೆ ಪುಲಿಕೇಶಿನಗರ ಕ್ಷೇತ್ರವನ್ನು ಪೂರ್ಣವಾಗಿ ಸೇರಿಸಲು ಅವಕಾಶ ಇದ್ದರೂ, ಒಂದು ವಾರ್ಡ್‌ಅನ್ನು ಕೇಂದ್ರ ಪಾಲಿಕೆಗೆ ಸೇರಿಸಲಾಗಿದೆ. ದಾಸರಹಳ್ಳಿ ಕ್ಷೇತ್ರದ ಎಲ್ಲ ಭಾಗಗಳನ್ನು ಉತ್ತರ ಪಾಲಿಕೆಯಲ್ಲೇ ಉಳಿಸಿಕೊಳ್ಳಬಹುದಾಗಿದ್ದರೂ, ಪಶ್ಚಿಮ ಹಾಗೂ ಉತ್ತರದಲ್ಲಿ ವಿಭಜಿಸಲಾಗಿದೆ. ಇದೇ ರೀತಿ ದಕ್ಷಿಣ ಪಾಲಿಕೆಗೆ ಪದ್ಮಾನಾಭನಗರ ಕ್ಷೇತ್ರವನ್ನು ಪೂರ್ಣವಾಗಿ ಸೇರಿಸಬಹುದಾಗಿದ್ದು, ಎರಡು ಪಾಲಿಕೆ ವ್ಯಾಪ್ತಿಗೆ ತರಲಾಗಿದೆ. ಅತಿ ದೊಡ್ಡ ಕ್ಷೇತ್ರಗಳಾದ ಯಶವಂತಪುರ ಮತ್ತು ರಾಜರಾಜೇಶ್ವರಿನಗರವನ್ನು ಒಂದಕ್ಕಿಂತ ಹೆಚ್ಚಿನ ಪಾಲಿಕೆಗೆ ಸೇರಿಸುವ ಅನಿವಾರ್ಯತೆಯನ್ನು ಹಲವು ಒಪ್ಪಿಕೊಂಡಿದ್ದಾರೆ.
ಕೇಂದ್ರ ಪಾಲಿಕೆ ರಚನೆಗೆ ತಗಾದೆ:
ಐದು ಕಾರ್ಪೊರೇಷನ್‌ಗಳ ಪೈಕಿ ಕೇಂದ್ರ ಪಾಲಿಕೆ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ. ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಿವಾಜಿನಗರ, ಶಾಂತಿನಗರ, ಸಿ.ವಿ.ರಾಮನ್‌ನಗರ ಕ್ಷೇತ್ರಗಳ ಎಲ್ಲ ಪ್ರದೇಶ ಹಾಗೂ ಪುಲಿಕೇಶಿನಗರ ಕ್ಷೇತ್ರದ ಕುಶಾಲನಗರ ವಾರ್ಡ್ ಸೇರಿಸಲಾಗಿದೆ. ಇಷ್ಟೂ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ಅತ್ಯಧಿಕ ಸಂಖ್ಯೆಯಲ್ಲಿದ್ದು, ಆ ವರ್ಗದವರಿಗೆ ಮೇಯರ್ ಸ್ಥಾನ ಸಿಗುವಂತೆ ಸೆಂಟ್ರಲ್ ಕಾರ್ಪೊರೇಷನ್ ರಚಿಸಲಾಗಿದೆ. ಇದೇ ರೀತಿ ಬಿಜೆಪಿ ಪ್ರಾಬಲ್ಯವಿರುವ ಹೊರವಲಯದ ಕ್ಷೇತ್ರಗಳನ್ನು 2-3 ಪಾಲಿಕೆಗೆ ಸೇರಿಸಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಚಿತಾವಣೆ ನಡೆಸಲಾಗಿದೆ ಎಂಬ ಆಕ್ಷೇಪ ಪ್ರತಿಪಕ್ಷಗಳಿಂದ ವ್ಯಕ್ತವಾಗಿದೆ. ಸರ್ಕಾರಕ್ಕೆ ಸದುದ್ದೇಶ ಇದ್ದಲ್ಲಿ ಸರ್ವಜ್ಞನಗರ ಕ್ಷೇತ್ರವನ್ನು ಪೂರ್ವ ಪಾಲಿಕೆಗೆ ಸೇರಿಸಿ, ಕೆ.ಆರ್.ಪುರದ ಒಂದಷ್ಟು ಭಾಗವನ್ನು ಉತ್ತರ ಪಾಲಿಕೆಗೆ ಸೇರಿಸಿ ಸಮಾನತೆ ಕಾಯ್ದುಕೊಳ್ಳುವ ಅವಕಾಶವನ್ನು ಬೇಕೆಂದೇ ತಪ್ಪಿಸಲಾಗಿದೆ. ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ 16 ಹಾಗೂ ಕಾಂಗ್ರೆಸ್‌ನ 12 ಶಾಸಕರನ್ನು ಹೊಂದಿದೆ. ಪ್ರತಿಪಕ್ಷ ಪ್ರಾಬಲ್ಯ ಕುಗ್ಗಿಸಿ ಅಧಿಕಾರ ಹಿಡಿಯಲು ಸರ್ಕಾರ ಪಾಲಿಕೆಗಳ ರಚನೆಯಲ್ಲಿ ರಾಜಕೀಯ ಬೆರೆಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಜಿಬಿಎ ರಚಿಸುವಾಗ ಸರ್ಕಾರವು ಹೊಸ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಮಾನ ಅಭಿವೃದ್ಧಿ, ಆದಾಯ ಮೂಲ, ಪ್ರದೇಶ ಇತ್ಯಾದಿ ಅಂಶಗಳನ್ನು ಆಧರಿಸಿ ರಚಿಸುವ ಭರವಸೆ ನೀಡಿತ್ತು. ಅದೀಗ ಸಂಪೂರ್ಣ ತದ್ವಿರುದ್ಧವಾಗಿದೆ. ಇದರಿಂದ ಪಾಲಿಕೆಗಳ ಮಧ್ಯೆ ಕಿತ್ತಾಟ, ಅಪನಂಬಿಕೆಗೆ ಅವಕಾಶವಾಗುತ್ತದೆ. ಐವರು ಮೇಯರ್, ಉಪ ಮೇಯರ್, ಹಲವಾರು ಸಮಿತಿಗಳು, ಅಧಿಕಾರಿಗಳ ದಂಡು ಇಟ್ಟುಕೊಂಡು ರಾಜಧಾನಿ ಅಭಿವೃಧ್ಧಿಪಡಿಸಲು ಸಾಧ್ಯವಿಲ್ಲ. ಸರ್ಕಾರ ಸೃಷ್ಟಿಸಿರುವ ಗೊಂದಲ ಸರಿಪಡಿಸದಿದ್ದಲ್ಲಿ ಕೋರ್ಟ್‌ಗೆ ಹೋಗಲು ಸಿದ್ಧ.
- ಎಸ್.ಹರೀಶ್, ಮಾಜಿ ಉಪ ಮೇಯರ್
ಹಾಲಿ ಬಿಬಿಎಂಪಿ ಪ್ರದೇಶದ ಭೌಗೋಳಿಕ ಅಂಶಗಳನ್ನು ಆಧರಿಸಿ ಹೊಸ ಕಾರ್ಪೊರೇಷನ್ ರಚಿಸಲಾಗಿದೆ. ಆಯಾ ದಿಕ್ಕಿನಲ್ಲಿರುವ ಪ್ರದೇಶಗಳನ್ನು ಅದರದೇ ಪಾಲಿಕೆ ವ್ಯಾಪ್ತಿಗೆ ಸೇರಿವೆ. ಈ ಕಸರತ್ತು ನಡೆಸುವ ವೇಳೆ 5 ಕ್ಷೇತ್ರಗಳು ಒಂದಕ್ಕಿಂತ ಹೆಚ್ಚಿನ ಪಾಲಿಕೆಗೆ ಸೇರಿದೆಯಷ್ಟೆ. ಆಕ್ಷೇಪ ವೇಳೆ ಉತ್ತಮ ಸಲಹೆ ಬಂದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಅವಕಾಶ ಇದೆ.
- ರಿಜ್ವಾನ್ ಅರ್ಷದ್, ಶಿವಾಜಿನಗರ ಕ್ಷೇತ್ರದ ಶಾಸಕ
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಭಾಷಾ ಬಾಂಧವ್ಯವನ್ನು ಒಡೆದು ತೆಲುಗು, ತಮಿಳು, ಹಿಂದಿ ಭಾಷಿಕರು ಮೇಯರ್ ಹುದ್ದೆ ಅಲಂಕರಿಸಲು ಅನುಕೂಲವಾಗುವಂತೆ 5 ಪಾಲಿಕೆ ರಚಿಸಲು ಕಾಂಗ್ರೆಸ್ ಮುಂದಾಗಿದೆ. ಅನುದಾನ ಹಂಚಿಕೆಯಲ್ಲಿ ಕೇಂದ್ರದ ವಿರುದ್ಧ ಬೊಟ್ಟು ಮಾಡುವ ಸಿಎಂ, ಈಗ ಅಂತಹದೇ ಮಾದರಿಯಲ್ಲಿ ಹೊಸ ಪಾಲಿಕೆಗಳ ಅವೈಜ್ಞಾನಿಕ ರಚನೆಯಿಂದ ಅನುದಾನ ತಾರಮತ್ಯ ಮಾಡಿದಂತಾಗುವುದಿಲ್ಲವೆ? ದುರುದ್ದೇಶದಿಂದ ಕೂಡಿರುವ ಪಂಚ ಪಾಲಿಕೆ ಮಾದರಿಯನ್ನು ಕೈಬಿಟ್ಟು ಏಕ ಪಾಲಿಕೆಯನ್ನು ಸಶಕ್ತಗೊಳಿಸಲಿ.
- ರಮೇಶ್ ಗೌಡ, ವಿಧಾನಪರಿಷತ್ ಮಾಜಿ ಸದಸ್ಯ