ಜಿಲ್ಲೆ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿ

ಇಂಡಿ: ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಒಳಪಡಿಸಬೇಕೆಂದು ಸಮಾಜದ ಜಗದ್ಗುರುಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಸಂಪೂರ್ಣ ನ್ಯಾಯಯುತವಾಗಿದ್ದು, ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಸಮಾಜದ ಮುಖಂಡ ಸಂಗಣ್ಣ ಹೊಸೂರ ಹೇಳಿದರು.

ತಾಲೂಕಿನ ಸಾತಲಗಾಂವ ಪಿ.ಐ. ಗ್ರಾಮದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಹಕ್ಕೊತ್ತಾಯ ಮತ್ತು ಕಿತ್ತೂರು ಚನ್ನಮ್ಮ ಜಯಂತಿ ಮತ್ತು ವಿಜಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಸರ್ಕಾರಗಳು ನಮ್ಮ ಸಮಾಜವನ್ನು ಕಡೆಗಣಿಸುತ್ತಿವೆ. ಹೀಗಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಗ್ರಾಮದ ಸಮಾಜದ ವತಿಯಿಂದ ಬೆಂಬಲಿಸೋಣ ಎಂದರು.

ಸಮಾಜದ ಮುಖಂಡರಾದ ಮಂಜುನಾಥ ಕಾಮಗೊಂಡ, ರಮೇಶ ಬಿರಾದಾರ, ಸಿದ್ದನಗೌಡ ಬಿರಾದಾರ ಇತರರು ಮಾತನಾಡಿ, ಸಮಾಜ ಸಂಘಟನೆಗೆ ಯುವಕರು ಮುಂದಾಗಿದ್ದು, ಎಲ್ಲರೂ ಸಣ್ಣವರು-ದೊಡ್ಡವರು ಎಂಬ ಮನೋಭಾವ ಹೊಂದದೆ ಸಮಾಜ ಸೇವೆಗಾಗಿ ದುಡಿಯೋಣ ಎಂದರು.

ಸಂಗಮೇಶ ಹೊಸೂರ, ರೇವಣಸಿದ್ದ ಬಿರಾದಾರ, ಶಿವಚಾಂದ ಮಡಗೊಂಡ, ಶಿವಕುಮಾರ ಬಿರಾದಾರ, ಗುಂಡು ಮಡಗೊಂಡ, ರಾಜಕುಮಾರ ಕಾಮಗೊಂಡ, ಮಹೇಶ ನಾರಾಯಣ, ರವಿಕಾಂತ ಮಡಟಗೊಂಡ, ಮಲ್ಲು ಗುಂಜಟ್ಟಿ, ನಾಗು ಕಣದಾಳ, ಶಿವಯೋಗೆಪ್ಪ ಬಿರಾದಾರ, ಪ್ರಕಾಶ ಮುಳಸಾವಳಗಿ, ಈರಣ್ಣ ಖಣದಾಳ, ಮಹೇಶ ಬಿರಾದಾರ, ಚೌಡಪ್ಪ ಮಾಶ್ಯಾಳ ಇತರರಿದ್ದರು.