ಜಿಲ್ಲೆ

ಮಹಾತ್ಮ ಗಾಂಧಿಯ ಬದಲಿಸಿದ ರಂಗಭೂಮಿ...

ಚಿತ್ರನಟ ಮಂಡ್ಯ ರಮೇಶ್​ ಅನಿಸಿಕೆ

ಪಂಚಮಿ ಪುರಸ್ಕಾರ ಪ್ರಶಸ್ತಿ ಸ್ವೀಕಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ಭೂಮಿಯಲ್ಲಿ ತುಂಬ ಇಷ್ಟವಾದ ಪಾತ್ರವೆಂದರೆ ಅದು ಮಹಾತ್ಮ ಗಾಂಧಿ ಅವರದ್ದು. ಜಗತ್ತನ್ನು ಬದಲಾಯಿಸುತ್ತೇನೆ ಎಂದು ಹೊರಟ ಅವರೇ ರಂಗಭೂಮಿಯಿಂದ ಬದಲಾದರು. ಅಂದು 'ಸತ್ಯ ಹರಿಶ್ಚಂದ್ರ' ನಾಟಕ ನೋಡದಿದ್ದರೆ, ಶ್ರವಣಕುಮಾರನ ಸ್ಥಿತಿ ತಿಳಿದುಕೊಳ್ಳದಿದ್ದರೆ ಬಹುಶ: ಅವರು ಬದಲಾಗುತ್ತಿರಲಿಲ್ಲವೇನೋ? ರಂಗಭೂಮಿಗೆ ಎಂತಹ ಶಕ್ತಿ ಇದೆ ಎನ್ನುವುದಕ್ಕೆ ಗಾಂಧೀಜಿಯೇ ಉದಾಹರಣೆ ಎಂದು ಚಿತ್ರನಟ ಮಂಡ್ಯ ರಮೇಶ್​ ತಿಳಿಸಿದರು.

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ 2ನೇ ದಿನದ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಪಂಚಮಿ ಟ್ರಸ್ಟ್​ (ರಿ.) ಉಡುಪಿ ಪ್ರಾಯೋಜಿತ ಪಂಚಮಿ ಪುರಸ್ಕಾರ-2025 ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

 ರಂಗಭೂಮಿ ಕೆಲಸಕ್ಕೇ ಮೀಸಲು

ನಮ್ಮ ಸಂಸ್ಕೃತಿಗಳೆಲ್ಲ ಮರೆತು ಹೋಗುತ್ತಿದೆ. ಅವುಗಳನ್ನು ಮತ್ತೆ ಕಂಡುಕೊಳ್ಳಲು ರಂಗ ತರಬೇತಿ ಶಿಬಿರ ಆರಂಭಿಸಿದೆ. ಒಂದು ಸಮುದಾಯ ಇನ್ನೊಂದು ಪಂಥವನ್ನು ಗೌರವಿಸದಿದ್ದರೆ, ಕಪ್ಪು-ಬಿಳುಪು ಬಣ್ಣಗಳ ನಡುವಿನ ಬೇರೆ ಬೇರೆ ಬಣ್ಣ ಗುರುತಿಸದಿದ್ದರೆ ಈ ದೇಶಕ್ಕೆ ಭವಿಷ್ಯವೇ ಇಲ್ಲ. ಒಳ್ಳೆಯದೆಲ್ಲ ದೇವರು, ಕೆಟ್ಟದ್ದೆಲ್ಲ ರಾಕ್ಷಸ ಸ್ವರೂಪದ್ದು. ಪ್ರಶಸ್ತಿಯೊಂದಿಗೆ ಕೊಟ್ಟ 1 ಲಕ್ಷ ರೂ. ಮೊತ್ತವನ್ನು ರಂಗಭೂಮಿಯ ಕೆಲಸಕ್ಕೇ ಬಳಸುತ್ತೇನೆ ಎಂದರು.

ಮಕ್ಕಳನ್ನು ಕಲೆಯಲ್ಲಿ ತೊಡಗಿಸಿ

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ರಂಗಭೂಮಿ ಅಥವಾ ಯಾವುದೇ ಕಲೆ ಮಾನವೀಯ ಸಂಬಂಧ ಬೆಸೆಯುತ್ತದೆ. ಹೀಗಾಗಿ ಪಾಲಕರು ಮಕ್ಕಳನ್ನು ಯಾವುದಾದರು ಒಂದು ಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಅದರಿಂದ ಮಕ್ಕಳ ಬೆಳವಣಿಗೆ ಹಾಗೂ ಬದಲಾವಣೆಯ ರೀತಿ ಸಕಾರಾತ್ಮಕವಾಗಿರುತ್ತದೆ. ಯುವ ಸಮುದಾಯದಲ್ಲಿ ಎಲ್ಲರೂ ಅಲ್ಲದಿದ್ದರೂ ಅನೇಕರು ಕೆಟ್ಟ ಮಾರ್ಗ ಅನುಸರಿಸುತ್ತಿದ್ದು, ಅವರನ್ನು ಕಲಾಸಕ್ತರನ್ನಾಗಿ ಮಾಡಬೇಕಿದೆ ಎಂದರು.

ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್​. ವೆಂಕಟರಮಣ ಐತಾಳ್​, ಗಾಂಧಿ ಆಸ್ಪತ್ರೆಯ ನಿರ್ದೇಶಕ, ಪಂಚಮಿ ಪುರಸ್ಕಾರ ಸ್ಥಾಪಕ ಡಾ. ಎಂ.ಹರಿಶ್ಚಂದ್ರ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ವಿಶ್ವನಾಥ ಶೆಣೈ, ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್​, ಉಪಾಧ್ಯಕ್ಷ ವಿಘ್ನೇಶ್ವರ ಅಡಿಗ, ಪ್ರ.ಕಾರ್ಯದರ್ಶಿ ಶಿಲ್ಪಾ ಜೋಶಿ, ಮಣಿಪಾಲದ ಶಂಕರ್​ ರೂಫಿಂಗ್​ ಸಿಸ್ಟಂನ ಸುಗುಣಾ ಸುವರ್ಣ ಉಪಸ್ಥಿತರಿದ್ದರು.

ಪಂಚಮಿ ಪುರಸ್ಕಾರದ ಸಂಚಾಲಕ ಜನಾರ್ದನ್​ ಕೊಡವೂರು ಸ್ವಾಗತಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್​ ಎಚ್​.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನಾ ನುಡಿಗಳನ್ನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಕೋಶಾಧಿಕಾರಿ ರಮೇಶ್​ ಭಟ್​ ಫಣಿಯಾಡಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮಂಡ್ಯ ರಮೇಶ್​ ನಿರ್ದೇಶನದಲ್ಲಿ ಹಬೀಬ್​ ತನ್ವೀರ್​ ರಚನೆಯ ವ್ಯಂಗ್ಯ ಹಾಗೂ ವಿಡಂಬನಾತ್ಮಕ ನಾಟಕ ಚೋರ ಚರಣದಾಸ ಪ್ರದರ್ಶನಗೊಂಡಿತು.

ಮಾಧ್ಯಮಗಳೇ ಇಂದಿನ ನಕ್ಷತ್ರಿಕರು!

ಬದುಕಿನ ಅಂತರಾಳದಲ್ಲಿ ಸಂಘರ್ಷ, ಹೋರಾಟ ಎಲ್ಲರಿಗೂ ಇರುತ್ತದೆ. ಆದರೆ, ಇಂತಹ ಕ್ಷಣಗಳು ಭಾವುಕ ಸ್ಥಿತೆಗೆ ತಲುಪಿಸುತ್ತದೆ. ಸತ್ಯ ಹರಿಶ್ಚಂದ್ರನಿಗೆ ಪರಿಪರಿಯಾಗಿ ಕಾಟ ಕೊಟ್ಟ ನಕ್ಷತ್ರಿಕನ ರೀತಿಯವರು ಈಗ ಇಲ್ಲದಿರಬಹುದು. ಆದರೆ, ನಮ್ಮ ಬೆನ್ನ ಹಿಂದೆ ಸದಾ ಬರುವ, ಆಕ್ರಮಿಸುವ ಎಲ್ಲ ಬಗೆಯ ಸಮಸ್ಯೆಗಳೂ ನಕ್ಷತ್ರಿಕನ ರೂಪವೇ ಆಗಿದೆ. ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಮಸ್ಯೆ, ಕಾಟವಿದೆ. ಮಾಧ್ಯಮವಂತೂ ಸಾಕ್ಷಾತ್ ನಕ್ಷತ್ರಿಕನ ರೂಪವೇ ಆಗಿದೆ. ಒಳ್ಳೆಯದು ಮಾಡಿದರೂ, ಕೆಟ್ಟದ್ದು ಮಾಡಿದರೂ ಅದು ಬೆನ್ನ ಹಿಂದೆ ಇದ್ದು ಪ್ರತಿನಿತ್ಯ, ಪ್ರತಿಕ್ಷಣ ಕಾಡುತ್ತಲೇ ಇರುತ್ತದೆ ಎಂದು ಮಂಡ್ಯ ರಮೇಶ್​ ಟೀಕಿಸಿದರು.

ಜಗತ್ತಿನ ಎಲ್ಲ ಕಲೆಗಳ ಮೂಲ ಅಸ್ತಿತ್ವವೇ ನಮ್ಮ ಬೇರಾಗಿರುವ ಜಾನಪದವಾಗಿದೆ. ರಾಮಾಯಣ ಮಹಾಭಾರತ, ಭಾಗವತದ ಎಲ್ಲ ಕಥೆಗಳೂ ಜನಪದದಿಂದಲೇ ಬಂದಿವೆ. ಅವುಗಳೆಲ್ಲ ನಮ್ಮ ಬದುಕಿನ ರೂಪಕಗಳು. ಕೃಷ್ಣನೆಂದರೆ ತುಂಬ ಇಷ್ಟ. ಒಮ್ಮೆಯಾದರೂ ರಂಗಭೂಮಿಯಲ್ಲಿ, ಸಿನಿಮಾದಲ್ಲಾದರೂ ಕೃಷ್ಣನ ಪಾತ್ರ ಮಾಡಬೇಕೆಂಬ ಆಸೆಯಿದೆ. | ಮಂಡ್ಯ ರಮೇಶ್​. ಚಿತ್ರನಟ