ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಜಾರಿ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಕೂಡಲೇ ಶಿಫಾರಸು ಮಾಡುವಂತೆ ಆಗ್ರಹಿಸಿ ಅ. 13ರಂದು ಧಾರವಾಡ ಜಿಲ್ಲಾ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ಕ್ಕೆ ಕಿತ್ತೂರ ರಾಣಿ ಚನ್ನಮ್ಮ ಮೂತಿರ್ಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಗುವುದು. ಪಾದಯಾತ್ರೆ ಮುಖಾಂತರ ಸಂಚರಿಸಿ ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ವಿವಿಧ ಮಹನೀಯರ ಮೂತಿರ್ಗಳಿಗೆ ಮಾಲಾರ್ಪಣೆ ಮಾಡಲಾಗುವುದು.
ನಂತರ ಚನ್ನಮ್ಮ ವೃತ್ತದಿಂದ ಬಂಕಾಪುರ ಚೌಕವರೆಗೆ ಬೈಕ್ ರ್ಯಾಲಿ ನಡೆಯಲಿದೆ. ಅಲ್ಲಿಂದ ಗಬ್ಬೂರ ಕ್ರಾಸ್ ವರೆಗೆ ಪಾದಯಾತ್ರೆ ನಡೆಸಿ ಹೆದ್ದಾರಿಯಲ್ಲಿ ಕುಳಿತು ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಲಾಗುವುದು ಎಂದರು.
ಮೀಸಲಾತಿಗಾಗಿ ಮೂರು ವರ್ಷದಿಂದ ನಿರಂತರ ಹೋರಾಟ ನಡೆದಿದೆ. ಹಿಂದಿನ ಬಿಜೆಪಿ ಸರ್ಕಾರ 2ಎ ಮೀಸಲಾತಿ ನೀಡುವುದಾಗಿ ಘೋಷಿಸಿತ್ತು. ಆದರೆ, ಕೊನೇ ಗಳಿಗೆಯಲ್ಲಿ 2ಡಿ ಎಂಬ ಹೊಸ ಮೀಸಲಾತಿ ಜಾರಿ ಮಾಡಿ ಅದರಲ್ಲಿ ಪಂಚಮಸಾಲಿ ಸಮಾಜ ಸೇರಿಸಿತು. ಅದು ಜಾರಿಯಾಗುವುದರೊಳಗೆ ನೀತಿ ಸಂಹಿತೆ ಜಾರಿಯಾಯಿತು ಎಂದರು.
ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮತ್ತೆ ಹಕ್ಕಿಗಾಗಿ ಹೋರಾಟ ಆರಂಭಿಸಿದ್ದೇವೆ. ವಿರಾಟ ಶಕ್ತಿ ಪ್ರದರ್ಶನ ಸೇರಿ ಅನೇಕ ಚಳವಳಿ ಮಾಡಿದ್ದೇವೆ. ಈಗ ಮತ್ತೆ ಸರ್ಕಾರದ ಕಣ್ಣು ತೆರೆಸಲು 30 ಜಿಲ್ಲೆಯಲ್ಲಿ ಇಷ್ಟಲಿಂಗ ಪೂಜೆಯೊಂದಿಗೆ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುತ್ತಿದೆ. ಬೆಳಗಾವಿ, ವಿಜಯಪುರ, ಕೊಪ್ಪಳ ಬಾಗಲಕೋಟೆಯಲ್ಲಿ ಪ್ರತಿಭಟನೆ ಮಾಡಲಾಗಿದೆ. ಐದನೇ ಸಮಾವೇಶ ಧಾರವಾಡದಲ್ಲಿ ನಡೆಯುತ್ತಿದೆ ಎಂದರು.
ಮುಂಬರುವ ಲೋಕಸಭೆ ಚುನಾವಣೆ ಒಳಗೆ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಐದು ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು. ಸಮಾಜದ 11 ಶಾಸಕರಿದ್ದಾರೆ. ಅವರು ಸಹ ಸರ್ಕಾರದೊಳಗೆ ಇದ್ದುಕೊಂಡು ಮೀಸಲಾತಿಗೆ ಒತ್ತಡ ತರಲಿದ್ದಾರೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಹೋರಾಟ ಪೂರ್ಣಗೊಳ್ಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸಮಾಜದ ಬೇಡಿಕೆ ಈಡೇರಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಹಾಗೂ ಮೀಸಲಾತಿಗಾಗಿನ ಹೋರಾಟ ಎರಡೂ ಪೂರಕವಾಗಿವೆ ಎಂದ ಸ್ವಾಮೀಜಿ, ಮತಾಂತರ ಸರಿಯಲ್ಲ. ಯಾರಾದರೂ ಹಣ, ಅಮಿಷಕ್ಕೆ ಬಲಿಯಾಗಿ ಮತಾಂತರವಾಗುತ್ತಿದ್ದರೆ ಅಂಥವರ ಮನವೊಲಿಸುವ ಕೆಲಸವನ್ನು ಮಾಡುವೆ ಎಂದರು.
ಸಮಾಜದ ಮುಖಂಡರಾದ ವೀರೇಶ ಉಂಡಿ, ರಾಜಶೇಖರ ಮೆಣಸಿನಕಾಯಿ, ನಂದಕುಮಾರ ಪಾಟೀಲ, ಗಂಗಾಧರ ದೊಡ್ಡವಾಡ, ದೀಪಾ ಗೌರಿ ಇದ್ದರು.