ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು 
ಜಿಲ್ಲೆ

ಪಂಚಮಸಾಲಿ ಸಮುದಾಯದ ಮೇಲೆ ಲಾಠಿಚಾರ್ಜ್ ಅವಮಾನವೀಯ

ಬಸವನಬಾಗೇವಾಡಿ: ಪಂಚಮಸಾಲಿ ಸಮುದಾಯದ ಮೇಲೆ ಲಾಠಿಚಾರ್ಜ್ ನಡೆಸಿರುವುದು ಅವಮಾನವೀಯ. ಅಧಿಕಾರದ ದರ್ಪದಿಂದ ಹೋರಾಟ ಹತ್ತಿಕ್ಕುವ ಕೆಲಸ ಮಾಡಬಾರದು ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ಕಾನೂನು ಪದವಿ ಓದಿದವರು. ಅವರಿಗೆ ಈ ಹಿಂದೆ ಪಂಚಮಸಾಲಿ ಸಮಾಜದವರಿಗೆ ಮೀಸಲಾತಿ ನೀಡುವುದು ಕಾನೂನು ಮತ್ತು ಸಂವಿಧಾನ ಬಾಹಿರ ಎಂಬುದು ಗೊತ್ತಿರಲಿಲ್ಲವೇ ? ಹಾಗಿದ್ದರೆ ಪಂಚಮಸಾಲಿ ಸಮಾಜದ ಶ್ರೀಗಳು ಹಾಗೂ ಮುಖಂಡರೊಂದಿಗೆ ಕಳೆದ 18 ತಿಂಗಳಿನಿಂದ ಮೂರ್ನಾಲ್ಕು ಬಾರಿ ಮೀಸಲಾತಿ ವಿಷಯವಾಗಿ ಚರ್ಚೆ ಮಾಡುವ ಅಗತ್ಯವಿತ್ತೆ.

ತಮ್ಮ ಸಚಿವ ಸಂಪುಟದ ಸಚಿವರು ನಮ್ಮ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದು ನಿಶ್ಚಿತ ಎಂದು ಹೇಳುವಾಗ ತಮ್ಮ ಸಚಿವರಿಗೆ ತಾವು ಏಕೆ ಈ ವಿಷಯದ ಬಗ್ಗೆ ಮಾತನಾಡಬೇಡಿ. ಇದರಿಂದ ಸರ್ಕಾರಕ್ಕೆ ಸಮಸ್ಯೆ ಆಗುತ್ತದೆ ಎಂದು ಅವರಿಗೆ ಕಿವಿ ಮಾತು ಹೇಳಬೇಕಾಗಿತ್ತು. ತಾವು ಕೂಡ ಈ ಮುಂಚೆ ಈ ವಿಷಯವನ್ನು ಹೇಳಬೇಕಾಗಿತ್ತು.

ಆದರೆ ಹೋರಾಟಗಾರರು, ಅಮಾಯಕರ ಮೇಲೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಈಗ ಅದರಿಂದ ತಪ್ಪಿಸಿಕೊಳ್ಳಲು ಪಂಚಮಸಾಲಿ ಸಮಾಜದವರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಲು ಈ ರೀತಿ ಹೇಳುವುದು ಸರಿಯಾದ ಕ್ರಮವಲ್ಲ. ಪಂಚಮಸಾಲಿ ಸಮುದಾಯದ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕಾದ ಸರ್ಕಾರ ಲಾಠಿಚಾರ್ಜ್ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಪ್ರಜಾಪ್ರಭುತ್ವದಲ್ಲಿ ಇಂಥ ಘಟನೆಗಳು ನಡೆಯಬಾರದು ಎಂದು ಹೇಳಿದರು.

ಪಂಚಮಸಾಲಿ ಸಮಾಜದ ಅಮಾಯಕರ ಮೇಲೆ ಹಾಕಿರುವ ಕೇಸನ್ನು ಸರ್ಕಾರ ಹಿಂಪಡೆಯಬೇಕು. ಪಂಚಮಸಾಲಿ ಸಮಾಜದ ಅನೇಕರು ಕೂಡ ಕೂಲಿ ಕೆಲಸ ಮಾಡುತ್ತಾರೆ. ಅವರ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಬೇಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ ಎಂದು ಹೇಳಿದರು.