ವಿಜಯವಾಣಿ ಸುದ್ದಿಜಾಲ ಗದಗ
ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ವಿಧಾನಸಭೆಯಲ್ಲಿ ಸಚಿವರ, ಶಾಸಕರ ಧ್ವನಿ ಅಡಗಿದ ಕಾರಣ ನ್ಯಾಯಾಂಗದ ಮೂಲಕ ಹೋರಾಟ ಆರಂಭಿಸಲಾಗಿದೆ. ಮೀಸಲಾತಿ ಸಿಗದಿದ್ದರೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ನಗರದಲ್ಲಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅ. 15 ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಷಯವಾಗಿ ಸಭೆ ಕರೆದಿದ್ದಾರೆ. ಆದರೆ, ಇನ್ನೂ ಸ್ಥಳ ಮತ್ತು ಸಮಯ ನಿಗದಿ ಆಗಿಲ್ಲ. ಸಭೆಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ. ಇಲ್ಲದಿದ್ದರೆ ಸಾವಿರ ಜನರೊಂದಿಗೆ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು.
ಪಂಚಮಸಾಲಿ ಹೋರಾಟ ನಿಂತ ನೀರಲ್ಲ. ಹರಿಯುವ ಗಂಗೋತ್ರಿ ಇದ್ದಂತೆ. ಈಗಾಗಲೇ 6 ಬಾರಿ ಹೋರಾಟ ಮಾಡಿ ಈಗ 7 ನೇ ಬಾರಿ ಹೋರಾಟಕ್ಕೆ ಅಣಿಯಾಗಿದ್ದೇವೆ. ಸದನದಲ್ಲಿ ಪಂಚಮಸಾಲಿ ಶಾಸಕರ ಧ್ವನಿಯನ್ನು ಅಡಗಿಸಲಾಗಿದೆ. ಬೆಳಗಾವಿಯಲ್ಲಿ ವಕೀಲರ ಪ್ರಥಮ ಸಮ್ಮೇಳನವನ್ನು ಯಶಸ್ವಿಯಾಗಿದ್ದು, ಸಮಾಜದ 2 ಸಾವಿರ ವಕೀಲರು ಸಭೆಯಲ್ಲಿ ಹಾಜರಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಲಿಂಗಾಯತರ ಹಲವು ಸಮುದಾಯಗಳಿಗೆ ನ್ಯಾಯ ನೀಡಲಾಗಿದೆ. ಅದರಂತೆ ಪಂಚಮಸಾಲಿಗಳಿಗೂ ನ್ಯಾಯ ಬೇಕು ಎಂದರು.
ನಮ್ಮಿಂದ ಕಾಂಗ್ರೆಸ್ ಅಧಿಕಾರಕ್ಕೆ:
ಪಂಚಮಸಾಲಿ ಹೋರಾಟದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರದ ಮೇಲೆ ನಮ್ಮ ಸಮಾಜದ ಋಣ ಇದೆ. ಅದನ್ನು ತಿರಿಸಬೇಕು. ದೇಶದ ಮಿಸಲಾತಿ ಎನ್ನುವ ಒಂದು ರೊಟ್ಟಿ ಇದ್ದಂತೆ. ಅದರಲ್ಲಿಯ ಒಂದು ತುಣುಕು ಪಂಚಮಸಾಲಿಗಳಿಗೂ ನೀಡಬೇಕು ಎನ್ನುವುದು ಹಕ್ಕೋತ್ತಾಯ. ಅ. 15 ರಂದು ನಡೆಯುವ ಸಭೆಯಲ್ಲಿ ನಮ್ಮ ಸಮುದಾಯದ ಎಲ್ಲ ಶಾಸಕರು ಹಾಜರಾಗಿ ಸಿಎಂ ಮನವೊಲಿಸುವ ಪ್ರಯತ್ನ ಮಾಡಬೇಕು ಎಂದರು.
ಕಾಂತರಾಜು ವರದಿ ವೈಜ್ಞಾನಿಕವಲ್ಲ:
ಕಾಂತರಾಜ ವರದಿಯ ಬಗ್ಗೆ ಲಿಂಗಾಯತ ಸಮುದಾಯದ 72 ಜನ ಶಾಸಕರು ಅಪಸ್ಪರ ಎತ್ತಿದ್ದಾರೆ. ನಾಡಿನ ಹಲವಾರು ಮಠಾಧೀಶರು ಕೂಡಾ ಈ ಬಗ್ಗೆ ಆಕ್ಷೇಪಣೆ ವ್ಯಕ್ತ ಪಡಿಸಿದ್ದಾರೆ. ಹಾಗಾಗಿ ಅದು ವೈಜ್ಞಾನಿಕವಾಗಿಲ್ಲ. ಸೂಕ್ತ ಮತ್ತು ವೈಜ್ಞಾನಿಕವಾಗಿ ನಡೆಯಬೇಕು ಎಂದರು.
ಸಿ. ಎಸ್. ನೇಗಿನಹಾಳ, ಆರ್. ಸಿ. ಪಾಟೀಲ, ಎಸ್. ಬಿ. ಪಾಟೀಲ, ಸಿ. ಎಸ್. ಪಾಟೀಲ, ಕೆ. ಶಿವಲಿಂಗಪ್ಪ, ರವೀಂದ್ರ ಶಾಬಾರಿ, ಸಿದ್ಧನಗೌಡ ಪಾಟೀಲ, ದೊಡ್ಡಬಸಪ್ಪ, ಕೆ. ಎಲ್. ಕರೆಗೌಡ್ರ, ಜಿ. ಎನ್. ಸಂಶಿ, ಎಸ್. ವೈ. ಕಲ್ಲಾಪುರ, ಎಂ. ಎ. ಸಂಗನಾಳ ಹಲವರು ಇದ್ದರು.