ಜಿಲ್ಲೆ

ಓಂಶ್ರೀ ಮಠದಲ್ಲಿ ಪಂಚಾಕ್ಷರಿ ಲಕ್ಷಾರ್ಚಯಜ್ಞ ಪೂರ್ಣಾಹುತಿ

ಮಂಗಳೂರು: ಮಹಾಶಿವರಾತ್ರಿ ಪ್ರಯುಕ್ತ ಗುರುನಗರ ಓಂಶ್ರೀ ಮಠದಲ್ಲಿ ಪಂಚಾಕ್ಷರಿ ಲಕ್ಷಾರ್ಚನೆ ಯಜ್ಞ ಪೂರ್ಣಾಹುತಿ ಸೋಮವಾರ ಸಂಜೆ ನಡೆಯಿತು.

ಪೂರ್ಣಾಹುತಿ ಬಳಿಕ ಮಾತಾಡಿದ ಆಶೀರ್ವಚನ ನೀಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅವರು, ಲೋಕ ಕಲ್ಯಾಣಾರ್ಥವಾಗಿ ಪಂಚಾಕ್ಷರಿ ಲಕ್ಷಾರ್ಚನೆ ಯಜ್ಞ ನಡೆದಿದೆ. ಇದರ ಫಲ ಸನಾತನ ಧರ್ಮ ಮತ್ತು ಅದರ ರಕ್ಷಣೆಗೆ ಕಟಿಬದ್ಧವಾಗಿರುವ ಸರ್ವ ಸನಾತನಿಗಳಿಗೂ ಸಿಗುವಂತಾಗಲಿ. ನಾವು ಮಾಡುವ ಪ್ರತಿಯೊಂದು ಧರ್ಮ ಕಾರ್ಯಗಳು, ಯಜ್ಞತಪ, ಧಾರ್ಮಿಕಸಭೆಗಳು, ಧರ್ಮ ಶಿಕ್ಷಣ ವರ್ಗಗಳು ಹಾಗೂ ಇವತ್ತಿನ ಪಂಚಾಕ್ಷರಿ ಲಕ್ಷಾರ್ಚಯಜ್ಞ ಕೂಡಾ ನಮ್ಮೆಲ್ಲರನ್ನು ಸತ್ಯಧರ್ಮದ ಕಡೆಗೆ ಕೊಂಡಯುತ್ತದೆ ಎಂದರು.

ಮಹಾಮಂಡಲೇಶ್ವರ ಸ್ವಾಮಿ ಓಂಶ್ರೀ ವಿದ್ಯಾನಂದ ಸರಸ್ವತಿ ಮಾತಾನಾಡಿ, ಮಹಾವರಾತ್ರಿ ಪ್ರಯುಕ್ತ 9 ದಿನಗಳ ಕಾಲ ಮಠದಲ್ಲಿ ಯಜ್ಞ ನಡೆದು ಇಂದು ಪೂರ್ಣಾಹುತಿ ನಡೆದಿದೆ. ಇದರಿಂದ ಲೋಕಕ್ಕೆ ಒಳಿತಾಗಲಿ. ಭಕ್ತರ ಇಷ್ಟಾರ್ಥ ಸಿದ್ಧಿಸಲಿ. ನಮ್ಮನ್ನು ಅಧೋಗತಿಗೆ ತಳ್ಳುತ್ತಿರುವ ಋಣಾತ್ಮಕ ಚಿಂತನೆಗಳಿಂದ ಪಾರಾಗಲು ಯಜ್ಞ ಕಾರ್ಯಗಳಂತಹ ಆಧ್ಯಾತ್ಮಿಕತೆ ನೆರವಾಗುತ್ತದೆ. ಈ ನೆಲದ ಸಂಸ್ಕೃತಿ ಅನೂಹ್ಯವಾದುದು. ನೂರಾರು ಧರ್ಮ, ಮತ, ಪಂಥ, ಭಾಷೆ, ಆಚಾರ ವಿಚಾರಗಳಿದ್ದರೂ ಉನ್ನತ ಜೀವನ ಮೌಲ್ಯ ಹೊಂದಿರುವವರು ನಾವು. ಇದನ್ನು ನಮ್ಮ ಮುಂದಿನ ತಲೆಮಾರಿಗೆ ದಾಟಿಸಬೇಕಾಗುತ್ತದೆ ಎಂದರು.

9 ದಿನಗಳ ಕಾಲ ಯಜ್ಞ ನಡೆಸಿದ ಮಾತಾಶ್ರೀ ಓಂಶ್ರೀ ಶಿವಜ್ಞಾನಮಯಿ ಸರಸ್ವತಿ ಹಾಗೂ ಮಹಾಮಂಡಲೇಶ್ವರ ಸ್ವಾಮಿ ಓಂಶ್ರೀ ವಿದ್ಯಾನಂದ ಸರಸ್ವತಿ ಅವರನ್ನು ಪುಷ್ಪವೃಷ್ಟಿಗೈದು ಸನ್ಮಾನಿಸಲಾಯಿತು. ಅಖಿಲ ಭಾರತ ಸಂತ ಸಮಿತಿಯ ಕೋಶಾಧಿಕಾರಿ ಮಹಾಬಲೇಶ್ವರ ಸರಸ್ವತಿ ಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಥ್ ಜೀ ಕೊಡಗು, ಸಂಘಟನಾ ಕಾರ್ಯದರ್ಶಿ ನಿಶ್ಚಲ ನಿರಂಜನ ದೇಸಿ ಕೇಂದ್ರ ಸ್ವಾಮೀಜಿ, ಕವಿ ಗುರುರಾಜ್ ಗುರೂಜಿ ಮತ್ತಿತರರು ಉಪಸ್ಥಿತರಿದ್ದರು.

--------------

ಸಮರ್ಪಣಾ ಮನೋಭಾವದಿಂದ ಮಾಡುವ ಯಜ್ಞ ದೇವರಿಗಾಗಿ ಅಲ್ಲ, ಅದು ನಮ್ಮನ್ನು ನಾವು ದೈವೀಕಾರ್ಯಗಳಿಂದ ಉದ್ಧರಿಸಿಕೊಳ್ಳುವುದಕ್ಕಾಗಿರುವುದು. ಧಾರ್ಮಿಕ ಕಾರ್ಯಗಳಿಂದ ನಮ್ಮ ಜೀವನ ಪ್ರೀತಿಯ ಸೆಲೆ ಹೊಂದಿದ್ದು, ನಮಗೆ ಅರಿವಿಲ್ಲದೆಯೇ ಬದುಕನ್ನು ಗಟ್ಟಿಗೊಳಿಸುವ ಸಾಮರ್ಥ್ಯ ಹೊಂದಿದೆ.

-ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ,

ಹುಕ್ಕೇರಿ ಹಿರೇಮಠ, ಬೆಳಗಾವಿ