ಜಿಲ್ಲೆ

ಡಿಸೆಂಬರ್​ನಲ್ಲಿ ಪಂಚಾಕ್ಷರ ಶ್ರೀಗಳ ಪುಣ್ಯಸ್ಮರಣೋತ್ಸವ

Gadag

ಗದಗ: ಇತ್ತೀಚೆಗೆ ಲಿಂಗೈಕ್ಯರಾದ ಅಡ್ನೂರ, ರಾಜೂರು ಹಾಗೂ ಗದಗ ಬೃಹನ್ಮಠಗಳ ಪೀಠಾಧಿಪತಿ ಲಿಂ. ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯಸ್ಮರಣೋತ್ಸವವನ್ನು ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು

ನಗರದ ನಿಸರ್ಗ ಬಡಾವಣೆಯಲ್ಲಿರುವ ಪುಟ್ಟರಾಜ ಗವಾಯಿಗಳ ಕ್ರಿಯಾಮೂರ್ತಿಗಳ ಭವನದಲ್ಲಿ ಲಿಂ.ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಅವರ ಉತ್ತರಾಧಿಕಾರಿ ವಿಶ್ವೇಶ್ವರ ದೇವರ ಸಾನ್ನಿಧ್ಯದಲ್ಲಿ ಭಾನುವಾರ ಜರುಗಿದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ನಗರದಲ್ಲಿ ಡಿ.13 ಅಥವಾ ಡಿ.20ರಂದು ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲು ಭಕ್ತರು ನಿರ್ಣಯಿಸಿದರು.

ನಿಸರ್ಗ ಬಡಾವಣೆ ಮಾಜಿ ಅಧ್ಯಕ್ಷ ಎ.ಎಸ್. ಪಾಟೀಲ ಮಾತನಾಡಿ, ಲಿಂ. ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಅವರು ನಿಸರ್ಗ ಬಡಾವಣೆಯಲ್ಲಿನ ಮಠದಲ್ಲಿದ್ದರೂ ಈ ನಾಡಿಗೆ ಬೆಳಕಾಗಿದ್ದರು. ಹೀಗಾಗಿ ಇಲ್ಲಿ ಅವರ ತೋರು ಗದ್ದುಗೆ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪುಣ್ಯ ಸ್ಮರಣೋತ್ಸವದ ದಿನದಂದೇ ಗದ್ದುಗೆ ನಿರ್ವಣಕ್ಕೆ ಅಡಿಗಲ್ಲು ಹಾಕಲಾಗುವುದು. ಶ್ರೀಗಳ ಅಪೇಕ್ಷೆಯಂತೆ ನಾಗಪ್ಪನ ಕಟ್ಟೆಯ ಬಳಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.

ಬೆಟಗೇರಿ ಶರಣಬಸವೇಶ್ವರ ಸದ್ಭಕ್ತ ಮಂಡಳಿ ಸದಸ್ಯ ಎಂ.ಎಸ್. ಮಲ್ಲಾಪೂರಗೌಡ್ರ ಮಾತನಾಡಿ, ಲಿಂಗೈಕ್ಯ ಶ್ರೀಗಳು ತುಂಬಾ ಸರಳರಾಗಿದ್ದು ಮೂವತೆôದು ವರ್ಷಗಳಿಂದ ನಮ್ಮ ಭಾಗದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪುರಾಣ ಪ್ರವಚನ ಮಾಡಿ ನಮ್ಮೆಲ್ಲರ ಮನೆ-ಮನಸ್ಸು ಹಸನಗೊಳಿಸಿದ್ದರು. ಅದೇ ಮಾರ್ಗದಲ್ಲಿ ಉತ್ತರಾಧಿಕಾರಿಗಳು ಆಶೀರ್ವದಿಸಲಿ ಎಂದರು.

ಪಂಚಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ಮಂಜಣ್ಣ ಬೇಲೇರಿ ಮಾತನಾಡಿ, ಲಿಂಗೈಕ್ಯ ಶ್ರೀಗಳ ಪುಣ್ಯ ಸ್ಮರಣೋತ್ಸವ ದಿನದ ಪ್ರಸಾದ ಸೇವೆಯನ್ನು ವಹಿಸಿಕೊಳ್ಳುತ್ತೇನೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಶರಣು ಗೋಗೇರಿ ಮಾತನಾಡಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮಕ್ಕೆ ವಿವಿಧ ಸಮಿತಿಗಳನ್ನು ರಚನೆ ಮಾಡಿ ಪರಸ್ಪರ ಜವಾಬ್ದಾರಿ ನಿಭಾಯಿಸಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಹೇಳಿದರು

ಸಾನ್ನಿಧ್ಯ ವಹಿಸಿದ್ದ ಶ್ರೀ ವಿಶ್ವೇಶ್ವರ ದೇವರು ಆಶೀರ್ವಚನ ನೀಡಿ, ಗುರುಗಳು ಸಾಗಿದ ಮಾರ್ಗದಲ್ಲಿ ನಾವು ಸಾಗುವ ಮೂಲಕ ಅವರ ಕನಸುಗಳು ನನಸು ಮಾಡಲು ಭಕ್ತರ ಸಹಕಾರ ಮುಖ್ಯ ಹೇಳಿದರು.

ಈ ಸಭೆಯಲ್ಲಿ ಬಸವರಾಜ ಮಲ್ಲಾಪೂರ, ಎಸ್.ಎನ್. ಮಡಿವಾಳರ, ಫಕ್ಕೀರಯ್ಯ ಹಿರೇಮಠ, ತೋಟಪ್ಪ ಅಕ್ಕಿ, ಕರಬಸಯ್ಯ ಹಿರೇಮಠ, ಎಲ್.ಎಸ್.ಪರ್ವತಗೌಡರ, ಶರಣಪ್ಪ ಗೊಳಗಳಕಿ, ಸುದರ್ಶನ ಹಾನಗಲ್, ಆರ್.ಎಸ್. ಪಾಟೀಲ, ಎ.ಬಿ. ಹೊಂಬಳ, ಎನ್.ವಿ. ಪಾಟೀಲ, ಬಿ.ಎನ್. ಸಜ್ಜನ, ಆರ್.ಆರ್. ಕಾಶಪ್ಪನವರ, ಮಂಜುನಾಥ ಹೊಳ್ಳಿಯವರ, ಅಶೋಕ ಹಾದಿ, ಅಶೋಕ ಗಿರಡ್ಡಿ, ಎಸ್.ವಿ. ಪರ್ವತೆ, ಎಸ್. ಎ. ಪಡೇಸೂರ, ಶಿವಪ್ಪ ಆಲೂರ, ಎಚ್. ಎಸ್. ಕುರಿ ಮತ್ತಿತರರು ಉಪಸ್ಥಿತರಿದ್ದರು.