ಜಿಲ್ಲೆ

ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ 11ರಿಂದ

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆ ಮಾನಸಗಿರಿಯ ಶ್ರೀಮದ್ ದೇವಾದಿದೇವ ಭಗವಾನ್ ಮಹಾವೀರ ತೀರ್ಥಂಕರರ ನೂತನ ತ್ರಿಕೂಟ ಜಿನಮಂದಿರದಲ್ಲಿ ವಾಸುಪೂಜ್ಯ ತೀರ್ಥಂಕರರ ಹಾಗೂ ಭಗವಾನ್ ನೇಮಿನಾಥ ತೀರ್ಥಂಕರರ ಮೂರ್ತಿ ಪ್ರತಿಷ್ಠಾಪನೆ, ಸಮವಸರಣ ಹಾಗೂ ಮಾನಸ್ಥಂಭೋಪರಿ ಚತುಮುಖ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವವನ್ನು ಮೇ 11 ರಿಂದ 15ರವರೆಗೆ ಆಯೋಜಿಸಲಾಗಿದೆ.

ಮಾನಸಗಿರಿಯ ಜಿನಮಂದಿರದಲ್ಲಿ ಗುರುವಾರದಂದು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಂಚಕಲ್ಯಾಣ ಮಹೋತ್ಸವದ ಅಧ್ಯಕ್ಷ ಉದಯ ಧಡೂತಿ, ಆಚಾರ್ಯ ಶ್ರೀ ಪುಣ್ಯಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

11ರಂದು ಬೆಳಗ್ಗೆ ಧ್ವಜಾರೋಹಣ, ವಾಸ್ತುಶಾಂತಿ, ಸಂಜೆ ಗರ್ಭವತರಣ ಕಲ್ಯಾಣ, ಧರ್ಮಸಭೆ, 12ರಂದು ಮಿತ್ಯವಿದಿ ಸಹಿತ ಪಂಚಾಮೃತ ಅಭಿಷೇಕ, ಕಲಿಕುಂಡ ಆರಾಧನೆ, ಶೋಭಾಯಾತ್ರೆ ಮೆರವಣಿಗೆ, ಜನ್ಮಕಲ್ಯಾಣ ಮಹೋತ್ಸವ, 13ಕ್ಕೆ ದೀಕ್ಷಾ ಕಲ್ಯಾಣ ಮಹೋತ್ಸವ, 14ಕ್ಕೆ ಕೇವಲ ಕಲ್ಯಾಣ ಮಹೋತ್ಸವ, 15ಕ್ಕೆ ಮೋಕ್ಷ ಕಲ್ಯಾಣ ಮಹೋತ್ಸವ ಹಾಗೂ ಮತ್ತಿತರ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. ಇದರೊಂದಿಗೆ ಬ್ರಹ್ಮದೇವರ ಮೂರ್ತಿ ಪ್ರತಿಷ್ಠಾಪನೆಯೂ ಆಗಲಿದೆ ಎಂದು ತಿಳಿಸಿದರು.

11ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ನ್ಯಾಯಾಧೀಶ ಪದ್ಮರಾಜ ದೇಸಾಯಿ, 12ರಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಹಾಪೌರ ರಾಮಪ್ಪ ಬಡಿಗೇರ, 13ಕ್ಕೆ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಸಂಜಯ ಪಾಟೀಲ, 14ಕ್ಕೆ ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾವಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪಂಚಕಲ್ಯಾಣ ಮಹೋತ್ಸವ ನಡೆಯಲಿರುವ ರಾಮಕೃಷ್ಣ ನಗರದ ಮಾನಸಗಿರಿಗೆ ಸಾರಿಗೆ ಸಂಸ್ಥೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜೈನ ಸಮಾಜದ ಪ್ರಮುಖರಾದ ಧರಣೇಂದ್ರ ಜವಳಿ, ಮಹಾವೀರ ಗೋಗಿ, ಶಾಂತರಾಜ ಹದಗಳಗಿ, ಎಸ್.ಬಿ. ನವಲಗುಂದ, ಪ್ರದ್ಮಶ್ರೀ ಹದಗಳಗಿ ಸುದ್ದಿಗೊಷ್ಠಿಯಲ್ಲಿ ಇದ್ದರು.