ಪಣಂಬೂರು ಬೀಚ್ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಡಾ.ವೈ. ಭರತ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ಎಆರ್‌ಎಸ್ ಬೀಚ್ ಟೂರಿಸಂ ಪಣಂಬೂರು ಸಂಸ್ಥೆಯ ಪಾಲುದಾರರಾದ ಲಕ್ಷ್ಮೀಶ ಭಂಡಾರಿ, ಡಾ.ರಾಜೇಶ್ ಹುಕ್ಕೇರಿ, ಡಾ.ಅನಿತಾ ರಾಜೇಶ್, ಸ್ಥಳೀಯ ಕಾರ್ಪೊರೇಟರ್ ಸುನೀತಾ, ಬಿಜೆಪಿ ಮುಖಂಡ ಅರವಿಂದ್ ಬೆಂಗ್ರೆ ಮೊದಲಾದವರಿದ್ದ 
ಜಿಲ್ಲೆ

ಪಣಂಬೂರು ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಕರ್ಯ- 7.5 ಕೋಟಿ ರೂ. ಮೊತ್ತದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಭರತ್ ಶೆಟ್ಟಿ ಹೇಳಿಕೆ

ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಬರುವ ಪ್ರವಾಸಿಗರಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಕರ್ಯ ನೀಡುವ ಸಲುವಾಗಿ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

7.50 ಕೋಟಿ ರೂ. ವೆಚ್ಚದಲ್ಲಿ ಪಣಂಬೂರು ಬೀಚ್ ಅಭಿವೃದ್ಧಿ ಕಾರ್ಯಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಮಂಗಳೂರು ಉತ್ತರ ಕ್ಷೇತ್ರವು ದೊಡ್ಡದಾದ ಬೀಚ್ ಹೊಂದಿದೆ. ಪಣಂಬೂರು ಬೀಚ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಬೇಕಿದೆ. ಈ ಹಿಂದೆ ಸರ್ಕಾರಕ್ಕೆ 10 ಸಾವಿರ ರೂ. ಕನಿಷ್ಠ ಆದಾಯ ಬರುತ್ತಿತ್ತು. ಈಗ ಹೊಸ ಮಾದರಿಯ ಒಪ್ಪಂದದಲ್ಲಿ ಗರಿಷ್ಠ 10 ಲಕ್ಷ ರೂ. ಸರ್ಕಾರಕ್ಕೆ ಪ್ರತಿ ತಿಂಗಳು ಆದಾಯ ಸಿಗಲಿದೆ. ಜತೆಗೆ ಪ್ರವಾಸಿಗರಿಗೆ ಎಲ್ಲ ಸೌಲಭ್ಯ ಸಿಗಲಿದೆ ಎಂದರು.

ಬೀಚ್ ಉದ್ದಕ್ಕೂ ಕಾರಿಡಾರ್ ನಿರ್ಮಾಣ, ತಣ್ಣೀರುಬಾವಿ ಬೀಚ್, ಸುರತ್ಕಲ್ ಬೀಚ್ ಅಭಿವೃದ್ಧಿ, ಹೊಸ ಪ್ರವಾಸಿ ಕೇಂದ್ರವಾಗಿ ನಾಯರ್ ಕುದ್ರು ಸೇರಿದಂತೆ ಹಲವು ಪ್ರವಾಸಿ ತಾಣಗಳ ಬೆಳವಣಿಗೆಗೆ ಯೋಜನೆ ರೂಪಿಸಲಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ. ಇತರ ಸಣ್ಣ ಪುಟ್ಟ ದೇಶಗಳು ಪ್ರವಾಸೋದ್ಯಮದಲ್ಲಿ ಆದಾಯ ಗಳಿಸುತ್ತಿದ್ದು, ನಮ್ಮ ಸ್ಥಳೀಯ ಯುವ ಸಮುದಾಯವೂ ಸ್ವಾವಲಂಬಿ ಜೀವನಕ್ಕೆ ಪ್ರವಾಸೋದ್ಯಮ ಬೆಳವಣಿಗೆ ಪೂರಕ ಎಂದರು.

ಎಲ್ಆರ್‌ಎಸ್ ಬೀಚ್ ಟೂರಿಸಂ ಪಣಂಬೂರು ಸಂಸ್ಥೆಯ ಪಾಲುದಾರರಾದ ಲಕ್ಷ್ಮೀಶ ಭಂಡಾರಿ ಪ್ರಸ್ತಾವಿಸಿದರು. ಪಣಂಬೂರು ಬೀಚ್‌ನಲ್ಲಿ ಸಕಲ ಸೌಲಭ್ಯ ಒದಗಿಸುವ ಸಲುವಾಗಿ ನೀಲಿ ನಕಾಶೆ ರೂಪಿಸಲಾಗಿದೆ. ವಿಶೇಷ ಮನರಂಜನೆ, ಸಾಹಸ ಕ್ರೀಡೆ, ಬೊಟಿಂಗ್ , ಹಟ್ ಹೌಸ್ ಸಹಿತ ಹಲವು ಸೌಲಭ್ಯ ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಸಿಗಲಿದೆ ಎಂದರು.

ಎಲ್ಆರ್‌ಎಸ್ ಪಾಲುದಾರರಾದ ಲಕ್ಷ್ಮೀಶ ಭಂಡಾರಿ, ಡಾ.ರಾಜೇಶ್ ಹುಕ್ಕೇರಿ, ಡಾ.ಅನಿತಾ ರಾಜೇಶ್, ಸ್ಥಳೀಯ ಕಾರ್ಪೊರೇಟರ್ ಸುನೀತಾ, ಬಿಜೆಪಿ ಮುಖಂಡ ಅರವಿಂದ್ ಬೆಂಗ್ರೆ, ಬೀಚ್ ನಿರ್ವಹಣಾ ಅಧಿಕಾರಿಗಳು ಉಪಸ್ಥಿತರಿದ್ದರು.