ಮಂಗಳೂರು: ಇಲ್ಲಿ ಹಲವಾರು ಸುಂದರ ರಮಣೀಯ ಕಡಲ ತೀರಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡಲು ಬರುತ್ತಿದ್ದಾರೆ. ಆದರೆ ಮೋಜು ಮಸ್ತಿ ಮಾಡಿದ ಬಳಿಕ ಕಡಲ ತೀರದ ಸ್ವಚ್ಚತೆಗೂ ಅವರು ಗಮನ ಹರಿಸುವುದು ಅತೀ ಅಗತ್ಯ ಎಂದು ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ತಂಡದ ಸುರತ್ಕಲ್ ಘಟಕದ ವತಿಯಿಂದ ಸುರತ್ಕಲ್ ಎನ್.ಐ.ಟಿ.ಕೆ ಸುರತ್ಕಲ್ ಕಡಲ ತೀರದಲ್ಲಿ ಭಾನುವಾರ ಸ್ವಚ್ಚತಾ ಅಭಿಯಾನದಲ್ಲಿ ಅವರು ಮಾತನಾಡಿದರು.
ಕಡಲ ತೀರವನ್ನು ಸ್ಚಚ್ಚಗೊಳಿಸುವುದು ಜಿಲ್ಲಾಡಳಿತದ ಮತ್ತು ಪ್ರವಾಸೋದ್ಯಮ ಇಲಾಖೆಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬ ಪ್ರವಾಸಿಗರೂ ತಮ್ಮ ಹೊಣೆ ಅರಿತು ಕಡಲ ತೀರವನ್ನು ಸ್ಚಚ್ಚಗೊಳಿಸಲು ಸಹಕರಿಸಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲ್, ಕಸ ಕಡ್ಡಿಗಳನ್ನು ಹಾಕುವುದರಿಂದ ಪರಿಸರ ನಾಶದ ಜೊತೆಗೆ ಸಮುದ್ರದಾಳದ ಜಲಚರಗಳಿಗೂ ತೊಂದರೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಹೆಚ್ಚು ಜವಾಬ್ದಾರಿ ವಹಿಸುವುದು ಅತೀ ಅಗತ್ಯ ಎಂದರು.
ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್, ಹಿರಿಯ ಗೃಹ ರಕ್ಷಕರಾದ ಸುರೇಶ್, ಯಮನೂರ, ಆನಂದ್, ದಿವಾಕರ, ಸಂದೇಶ, ಸರಿತಾ, ಮನೋರಮಾ, ಸಾವಿತ್ರಿ ಮೊದಲಾದವರಿದ್ದರು.