ಜಿಲ್ಲೆ

ಚೆಲ್ಯಡ್ಕ ಸೇತುವೆ ಎರಡನೇ ಬಾರಿ ಜಲಾವೃತ: ಪುತ್ತೂರು-ಪರ್ಲಡ್ಕ-ಪಾಣಾಜೆ ರಸ್ತೆ ಸಂಚಾರ ಕಡಿತ

ಈಶ್ವರಮಂಗಲ: ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಸುರಿಯುತ್ತಿರುವ ಜಡಿಮಳೆಯಿಂದ ಈ ಮಳೆಗಾಲದಲ್ಲಿ ಗುರುವಾರ ಮೊದಲ ಬಾರಿಗೆ ಮುಳಗಡೆಯಾಗಿದ್ದ ಪುತ್ತೂರು -ಪರ್ಲಡ್ಕ-ಪಾಣಾಜೆ ರಸ್ತೆಯ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಸೇತುವೆ ಭಾನುವಾರ ಮತ್ತೆ ಜಲಾವೃಗೊಂಡಿದ್ದು, ಈ ಬಾರಿ ಎರಡನೇ ಸಲ ಮುಳುಗಡೆಯಾಗುತ್ತಿದೆ.

ಮುಳುಗು ಸೇತುವೆ ಎಂದೇ ಗುರುತಿಸಿಕೊಂಡಿರುವ ಹಾಗೂ ಕುಸಿಯುತ ಹಂತಕ್ಕೆ ತಲುಪಿರುವ ಚೆಲ್ಯಡ್ಕ ಸೇತುವೆ ಪ್ರತಿ ವರ್ಷ ಮಳೆಗಾಲದಲ್ಲಿ ಮೂರ‌್ನಾಲು ಬಾರಿ ಜಲಾವೃತಗೊಳ್ಳುತ್ತಿದೆ. ಕಳೆದ ವರ್ಷದ ಮಳೆಗಾಲದಲ್ಲೂ 4 ಬಾರಿ ಜಲಾವೃತಗೊಂಡಿತ್ತು.
ಸೇತುವೆ ಜಲಾವೃತಗೊಂಡಿರುವುದರಿಂದ ಪುತ್ತೂರಿನಿಂದ ಪರ್ಲಡ್ಕ-ಕುಂಜೂರುಪಂಜ-ಗುಮ್ಮಟೆಗದ್ದೆ ಮೂಲಕವಾಗಿ ಬೆಟ್ಟಂಪಾಡಿ-ಪಾಣಾಜೆ ಕಡೆಗೆ ತೆರಳುವ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಪುತ್ತೂರು -ಪರ್ಲಡ್ಕ-ಕುಂಜೂರುಪಂಜ-ದೇವಸ್ಯ-ಪಾಣಾಜೆ ರಸ್ತೆಯಲ್ಲಿ ಖಾಸಗಿ ಬಸ್ಸುಗಳ ಮಾತ್ರ ವ್ಯವಸ್ಥೆ ಇದ್ದು, ಚೆಲ್ಯಡ್ಕ ಸೇತುವೆ ಮುಳುಗಡೆಯಾದ ಪರಿಣಾಮವಾಗಿ ಈ ಬಸ್ಸುಗಳು ಮಾತ್ರವಲ್ಲದೆ ಖಾಸಗಿ ವಾಹನಗಳು ಪುತ್ತೂರಿನಿಂದ ಸಂಟ್ಯಾರು-ಕೈಕಾರ ಮೂಲಕವಾಗಿ ಸುತ್ತುಬಳಸಿ ತೆರಳಬೇಕಾಗಿ ಬಂದಿದೆ. ಇದರಿಂದಾಗಿ ಖಾಸಗಿ ಬಸ್ಸುಗಳನ್ನೇ ಅವಲಂಬಿಸಿಕೊಂಡಿರುವ ಈ ಭಾಗದ ಜನತೆ ತೊಂದರೆಗೀಡಾಗಿದ್ದಾರೆ.