ನಾಗ ಪಂಚಮಿ ಪ್ರಯುಕ್ತ ಕಂಪ್ಲಿಯ ಐತಿಹಾಸಿಕ ಕೋಟೆ ಪಂಪಾಪತಿ ದೇವಸ್ಥಾನ ಎದುರಿನ ನಾಗ ಸಮುಚ್ಛಾಯದಲ್ಲಿನ ನಾಗಪ್ರತಿಮೆಗಳಿಗೆ ಜನರು ಹಾಲೆರೆದರು. 
ಜಿಲ್ಲೆ

ನಾಗ ಪ್ರತಿಮೆಗಳಿಗೆ ಹಾಲಿನ ಅಭಿಷೇಕ

ಪ್ರವೀಣ ಉದುಸಾ ದಲಬಂಜನ್

ಕಂಪ್ಲಿ: ನಾಗಪಂಚಮಿ ನಿಮಿತ್ತ ಪಟ್ಟಣ ಸೇರಿ ತಾಲೂಕಿನಾದ್ಯಂತ ನಾಗರ ಪ್ರತಿಮೆಗಳಿಗೆ ಪೂಜಿಸಿ ಭಾನುವಾರ ಹಾಲು ಎರೆದು ಸಂಭ್ರಮದಿಂದ ಆಚರಿಸಲಾಯಿತು.

ಭಕ್ತಿಯಿಂದ ಹಾಲೆರೆದ ಜನರು

ಪಟ್ಟಣದ ಕೋಟೆಯ ತುಂಗಭದ್ರಾ ನದಿ ತಟದ ಐತಿಹಾಸಿಕ ಪಂಪಾಪತಿ ದೇವಸ್ಥಾನ ಎದುರಿನ ನಾಗ ಪ್ರತಿಮೆಗಳ ಸಮುಚ್ಚಾಯ ಕಟ್ಟೆ, ಪೇಟೆ ಬಸವೇಶ್ವರ, ರಾಮಲಿಂಗ ದೇವಸ್ಥಾನ, ಸತ್ಯನಾರಾಯಣ ಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿನ ಸುಬ್ರಹ್ಮಣ್ಯ ನಾಗಪ್ರತಿಮೆ,

ನಟರಾಜ ಕಲಾವಿಜಯ ಸಂಘದ ಬಳಿ ಬಾವಿ, ಎಪಿಎಂಸಿಯ ಆವರಣಗೋಡೆಯ ಬಳಿ ಈರಣ್ಣ ಗುಡಿ ಸೇರಿ ಬಾವಿ, ವೃಕ್ಷಗಳ ಬುಡದಲ್ಲಿ ಪ್ರತಿಷ್ಠಾಪಿಸಿದ ನಾಗಪ್ರತಿಮೆಗಳಿಗೆ ಜನರು ಕುಟುಂಬದ ಸದಸ್ಯರೊಂದಿಗೆ ಪೂಜಿಸಿ ಹಾಲೆರೆದು ಭಕ್ತಿಯನ್ನು ಸಮರ್ಪಿಸಿದರು. ಗ್ರಾಮೀಣ ಭಾಗಗಳಲ್ಲಿನ ರೈತಾಪಿ ಜನರು ತಮ್ಮ ಹೊಲಗದ್ದೆಗಳಲ್ಲಿನ ಹುತ್ತ, ನಾಗಪ್ರತಿಮೆಗಳಿಗೆ ಶ್ರದ್ಧಾಭಕ್ತಿಗಳಿಂದ ಪೂಜೆ ಸಲ್ಲಿಸಿದರು.

ಮನೆ ಆವರಣದಲ್ಲಿ ರಂಗೋಲಿಯಲ್ಲಿ ಚಿತ್ತಾರ

ಚಿತ್ರಗಾರ ಕುಟುಂಬದವರು ಹಸಿ ಮಣ್ಣಿನಿಂದ ತಯಾರಿಸಿದ ಮಣ್ಣಿನ ನಾಗಪ್ಪ ಪ್ರತಿಮೆಗಳನ್ನು ಕೊಂಡು ಪೂಜಿಸಿದರು. ನಾಗ ಪ್ರತಿಮೆಗಳಿಗೆ ಹತ್ತಿಯ ಅಂಗನೂಲು ಹಾಕಿ, ಹಾಲೆರೆದು ತಂಬಿಟ್ಟುನೊಂದಿಗೆ ನಾನಾ ತರಹದ ಉಂಡೆಗಳನ್ನು, ಹಸೆಕಡ್ಲೆಯನ್ನು ನೈವೇದ್ಯವಾಗಿ ಅರ್ಪಿಸಿದರು. ನಸುಕಿನಜಾವ ಮಹಿಳೆ, ಯುವತಿಯರು ಮನೆ ಅಂಗಳದಲ್ಲಿ ನಾಗಬಂಧ, ತಳುಕಿನ ಜೋಡಿ ನಾಗಗಳ ರಂಗೋಲಿ ಚಿತ್ರಿಸಿರುವುದು ಕಂಡುಬಂತು. ಚಿಣ್ಣರು ಗ್ರಾಮೀಣ ಭಾಗಗಳಲ್ಲಿ ಕೊಬ್ರಿ ಬಟ್ಟಲನ್ನು ಬಗುರಿಯಾಗಿ ಆಡಿಸುವುದು, ಜೋಕಾಲಿ ಕಟ್ಟಿ ಆಡಿ ಸಂತಸಪಟ್ಟರು.