ಬೆಂಗಳೂರು: ಕವಿ ಡಾ. ಸಿದ್ದಲಿಂಗಯ್ಯ ಅವರನ್ನು ಪಂಪ ಪ್ರಶಸ್ತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯ್ಕೆ ಮಾಡಿದೆ. ಆಯ್ಕೆ ಸಮಿತಿ ಅಧ್ಯಕ್ಷರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಿದ್ದಲಿಂಗಯ್ಯ ಹೆಸರು ಅಂತಿಮಗೊಳಿಸಲಾಗಿದೆ. ಪ್ರಶಸ್ತಿಯು 5 ಲಕ್ಷ ರೂ. ನಗದು, ಪ್ರಶಸ್ತಿ ಫಲಕ, ಪುತ್ಥಳಿ ಒಳಗೊಂಡಿದೆ. ಫೆ.8ರಂದು ಬನವಾಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಗೌಪ್ಯತೆ ನಿಯಮ ಉಲ್ಲಂಘನೆ: ಪಂಪ ಪ್ರಶಸ್ತಿ ಆಯ್ಕೆಗೆ ಸರ್ಕಾರಿ ಆದೇಶ ಹೊರಬೀಳುವ ಮುನ್ನವೆ ಹೆಸರು ಬಹಿರಂಗಪಡಿಸುವ ಮೂಲಕ ಆಯ್ಕೆ ಸಮಿತಿಯು ಗೌಪ್ಯತೆ ನಿಯಮ ಉಲ್ಲಂಘಿಸಿದೆ. ಪ್ರಶಸ್ತಿಗೆ ಆಯ್ಕೆ ಮಾಡುವಾಗ ಅನುಸರಿಸಬೇಕಾದ 15ಕ್ಕೂ ಹೆಚ್ಚು ನಿಬಂಧನೆಗಳಿವೆ. ಈ ಪೈಕಿ 11ನೇ ನಿಯಮದಲ್ಲಿ, ‘ಆಯ್ಕೆ ಸಮಿತಿಯು ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಂತರ ಸರ್ಕಾರಿ ಆದೇಶದವರೆಗೆ ಗೌಪ್ಯತೆ ಕಾಪಾಡಬೇಕು’ ಎಂದು ತಿಳಿಸಲಾಗಿದೆ. ಆಯ್ಕೆ ಸಮಿತಿಗೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ್, ಸಾಹಿತಿ ರಾಘವೇಂದ್ರ ಪಾಟೀಲ್, ಇಲಾಖೆ ನಿರ್ದೇಶಕರು, ಜಂಟಿ ನಿರ್ದೇಶಕರು ಸೇರಿ 16 ಸದಸ್ಯರಿದ್ದಾರೆ. ಸರ್ಕಾರಿ ಆದೇಶಕ್ಕೂ ಮುನ್ನವೇ ಸುದ್ದಿ ಹೊರಬಂದಿದೆ.
ಹಿಂದಿನ ಪ್ರಕರಣ: ಬಿ.ವಿ.ಕಾರಂತ ಪ್ರಶಸ್ತಿಗೆ ಹಿಂದೆ ಶಿವಮೊಗ್ಗದ ರಂಗಕಲಾವಿದೆ ಎಸ್. ಮಾಲತಿ ಆಯ್ಕೆಯಾಗಿದ್ದರು. ಈ ವಿಚಾರವನ್ನು ಸಮಿತಿ ಸದಸ್ಯರು ಬಹಿರಂಗಪಡಿಸಿ, ಹಲವೆಡೆ ಅವರನ್ನು ಸನ್ಮಾನಿಸಲಾಗಿತ್ತು. ಆದರೆ, ಸರ್ಕಾರಿ ಆದೇಶವಾಗುವ ಮೊದಲು ಅವರು ಮೃತಪಟ್ಟಿದ್ದರು. ಮರಣೋತ್ತರವಾಗಿ ಪ್ರಶಸ್ತಿ ನೀಡುವಂತಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಶಸ್ತಿಯನ್ನು ರದ್ದುಗೊಳಿಸಿತು.
ಸರ್ಕಾರಿ ಆದೇಶ ಆಗುವವರೆಗೂ ಗೌಪ್ಯತೆ ಕಾಪಾಡಿಕೊಳ್ಳಬೇಕು. ಆದರೆ, ಹೇಗೆ ಬಹಿರಂಗವಾಗಿದೆ ಎಂದು ತಿಳಿಯುತ್ತಿಲ್ಲ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ. | ಎಸ್. ರಂಗಪ್ಪ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ