ಜಿಲ್ಲೆ

ವನಸಂಪತ್ತು ವೃದ್ಧಿಗೆ ವನಮಹೋತ್ಸವ ಅಭಿಯಾನ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪರಿಸರ ರಕ್ಷಣೆ ಜತೆಗೆ ವನಸಂಪತ್ತು ವೃದ್ಧಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರದ ಕೋಟಿ ಸಸಿ ನೆಡುವ ಆಂದೋಲನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಸಸಿ ನೆಟ್ಟು ಪೋಷಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಶಿವಶಂಕರ್ ಹೇಳಿದರು.
ಅರಣ್ಯ ಇಲಾಖೆಯ ವನಮಹೋತ್ಸವ ಸಪ್ತಾಹದ ಅಂಗವಾಗಿ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬೆಟ್ಟದಲ್ಲಿ ಮಂಗಳವಾರ ವಿವಿಧ ಜಾತಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲೇ ಅತೀ ಹೆಚ್ಚು ಸಸಿ ನೆಡುವ ಮೂಲಕ ಜಿಲ್ಲೆಯಲ್ಲಿ ವನಕ್ರಾಂತಿ ಸೃಷ್ಟಿಸಬೇಕು ಎಂಬ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜತೆಗೆ ವಿವಿಧ ಇಲಾಖೆ ಅಧಿಕಾರಿಗಳು ಮುಂದಡಿ ಇಟ್ಟಿದ್ದು, ಇದಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯ ಬಡಾವಣೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವಂತೆ ಸಾರ್ವಜನಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ರಸ್ತೆ ಬದಿಗಳಲ್ಲಿ ಮನೆಗಳ ಮುಂದೆ ಸಸಿಗಳನ್ನು ನೆಡಲು ಸಾರ್ವಜನಿಕರಿಗೆ ಮನವಿ ಮಾಡಲಾಗುತ್ತಿದ್ದು, ಕೋಟಿ ಸಸಿ ನೆಡುವ ಕಾರ್ಯಕ್ರಮದಲ್ಲಿ ನಗರ-ಪಟ್ಟಣ ಪ್ರದೇಶಗಳಲ್ಲೂ ಹಸಿರು ವಲಯ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಯಶಸ್ವಿಗೊಳಿಸುವ ಪ್ರಯತ್ನ: ಕೋಟಿ ಸಸಿ ನೆಡುವ ಆಂದೋಲನದ ವೇಳೆ ಜಿಲ್ಲೆಯಲ್ಲಿ 6 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಗುರಿ ಇಟ್ಟುಕೊಂಡಿದ್ದು, ಗುರಿ ಮೀರಿ ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿಯೇ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಎನ್‌ಜಿಒ, ವಿವಿಧ ಸಂಘಟನೆಗಳು, ಶಾಲಾ-ಕಾಲೇಜು, ಆಸ್ಪತ್ರೆ, ಕೈಗಾರಿಕಾ ಸಂಘಗಳ ಸಹಯೋಗ ಪಡೆದುಕೊಳ್ಳಲಾಗಿದೆ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್‌ಕುಮಾರ್ ಪಾಟೀಲ್ ತಿಳಿಸಿದರು. ನಿರೀಕ್ಷೆಯಂತೆ ಉತ್ತಮ ಮಳೆಯಾದರೆ ಕಾರ್ಯಕ್ರಮ ಹೆಚ್ಚು ಸಲವಾಗುತ್ತದೆ. ಸಸಿಗಳನ್ನು ನೆಡುವ ಜತೆಗೆ ಅವುಗಳ ರಕ್ಷಣೆ ಹಾಗೂ ಪೋಷಣೆಗೆ ಆದ್ಯತೆ ನೀಡಲಾಗಿದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟ ಸಸಿಗಳ ಬಗ್ಗೆ ಸಾರ್ವಜನಿಕರು ನಿಗಾ ವಹಿಸುವ ಮೂಲಕ ಕಾರ್ಯಕ್ರಮದ ಧ್ಯೇಯೋದ್ದೇಶ ಈಡೇರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.