ಕುಶಾಲನಗರ
ಕರ್ನಾಟಕ ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಗುರುವಾರ ಕುಶಾಲನಗರ ತಾಲೂಕು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಬಸವನಹಳ್ಳಿ ಗ್ರಾಮದಲ್ಲಿರುವ ಮೇದ ಜನಾಂಗದವರು ವಾಸಿಸುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳೀಯರು ತಯಾರಿಸಿದ ಕರಕುಶಲ ಬಿದುರಿನ ಉತ್ಪನ್ನಗಳನ್ನು ಮತ್ತು ಈ ಚಟುವಟಿಕೆಗಳಿಗೆ ಸರ್ಕಾರದಿಂದ ಪಡೆಯುತ್ತಿರುವ ಸವಲತ್ತುಗಳ ಬಗ್ಗೆ ಪರಿಶೀಲಿಸಿ ಮಾರ್ಗದರ್ಶನ ನೀಡಿದರು.
ಬಸವನಹಳ್ಳಿ ಗ್ರಾಮದ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಮನೆಗಳಿಗೆ ಭೇಟಿ ನೀಡಿ, ಅಸಮರ್ಪಕ ಒಳಚರಂಡಿ ವ್ಯವಸ್ಥೆ ಹಾಗೂ ಸ್ಥಳೀಯ ಶಿಬಿರದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಚಾಲನೆ ನೀಡದಿರುವ ಬಗ್ಗೆ ಮಾಹಿತಿ ಪಡೆದುಕೊಂಡರು
ದೊಡ್ಡಬೆಟಗೇರಿ ಗ್ರಾಮದಲ್ಲಿ ಸೋಲಿಗ ಜನಾಂಗದವರಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಹೋಲಿಗೆ ತರಬೇತಿ ಕಾರ್ಯಾಗಾರ ವೀಕ್ಷಿಸಿ, ಮಾಹಿತಿ ಪಡೆದುಕೊಂಡರು. ಈ ತರಬೇತಿ ನಂತರ ಸ್ವಉದ್ಯೋಗ ಕೈಗೊಳ್ಳಲು ಸರ್ಕಾರದಿಂದ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿ ಪರಮೇಶ್ ಕುಮಾರ್, ಕುಶಾಲನಗರ ತಾಲೂಕು ದಂಡಾಧಿಕಾರಿ ಕಿರಣ್ ಗೌರಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು.