ಜಿಲ್ಲೆ

ಕರಿಂಬಿಲದಲ್ಲಿ ಗುಡ್ಡ ಕುಸಿತ ಭೀತಿ!: ಚೆರ್ಕಳ-ಕಲ್ಲಡ್ಕ ಸಂಪರ್ಕ ಅಯೋಮಯ : ಪಳ್ಳತ್ತಡ್ಕದಲ್ಲೂ ರಸ್ತೆ ಶಿಥಿಲ

ಸೌಮ್ಯ ಆರ್

ಪುರುಷೋತ್ತಮ ಪೆರ್ಲ ಕಾಸರಗೋಡು

ಚೆರ್ಕಳ - ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ರಸ್ತೆಯ ಬದಿಯಡ್ಕ ಸನಿಹದ ಕರಿಂಬಿಲದಲ್ಲಿ ನಾಲ್ಕು ವರ್ಷದ ಹಿಂದೆ ಭೂಕುಸಿತದಿಂದ ಸಂಕಷ್ಟ ಅನುಭವಿಸಿದ್ದ ಸ್ಥಳೀಯ ಜನತೆ ಹಾಗೂ ಪ್ರಯಾಣಿಕರಿಗೆ ಈ ಮಾರ್ಗದಲ್ಲಿನ ಸಂಚಾರ ಭೀತಿ ಇನ್ನೂ ದೂರವಾಗಿಲ್ಲ.

ನಾಲ್ಕು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಭೂಕುಸಿತ ಉಂಟಾಗಿತ್ತು. ರಸ್ತೆ ಅಂಚಿನ ಬೃಹತ್ ಗುಡ್ಡದ ಒಂದು ಪಾರ್ಶ್ವ ಕುಸಿದ ಪರಿಣಾಮ ಸುಮಾರು 100 ಮೀ. ದೂರದವರೆಗೂ ರಸ್ತೆಗೆ ಭಾರಿ ಪ್ರಮಾಣದಲ್ಲಿ ಮಣ್ಣು ತುಂಬಿಕೊಳ್ಳುವಂತಾಗಿತ್ತು. ಇದರಿಂದ ಸುಮಾರು ಒಂದುವರೆ ತಿಂಗಳು ವಾಹನ ಸಂಚಾರವನ್ನೇ ಸ್ಥಗಿತಗೊಳಿಸಲಾಗಿತ್ತು. ಲಘು ವಾಹನಗಳು ಸಮೀಪದ ಹಾದಿಯಾಗಿ ಸಂಚಾರ ನಡೆಸಿದರೆ, ಕೆಎಸ್ಸಾರ್ಟಿಸಿ ಸೇರಿ ಅಂತಾರಾಜ್ಯ ಸಂಚಾರದ ಬಸ್‌ಗಳೂ ಬೇರೆ ರೂಟಲ್ಲಿ ಸಂಚಾರ ನಡೆಸಬೇಕಾಗಿ ಬಂದಿತ್ತು. ಒಂದುವರೆ ತಿಂಗಳ ಕಾಲ ಈ ಪ್ರದೇಶದ ಜನತೆ ಬಹಳಷ್ಟು ಸಮಸ್ಯೆ ಎದುರಿಸಬೇಕಾಗಿ ಬಂದಿತ್ತು.

ಕಡತಕ್ಕೆ ಸೀಮಿತವಾದ ಭರವಸೆ

ಗುಡ್ಡ ಕುಸಿತ ತಡೆಗಟ್ಟಲು ಶಾಶ್ವತ ತಡೆಗೋಡೆ ನಿರ್ಮಿಸುವ ಲೋಕೋಪಯೋಗಿ ಇಲಾಖೆೆಯ ಭರವಸೆ ಕಡತಕ್ಕೆ ಸೀಮಿತವಾಗಿದೆ. ನಂತರ ಕರಿಂಬಿಲದಲ್ಲಿ ರಸ್ತೆಗೆ ಬಿದ್ದಿರುವ ಮಣ್ಣು ತೆರವುಗೊಳಿಸಿ, ಚೆರ್ಕಳದಿಂದ ಅಡ್ಕಸ್ಥಳವರೆಗೆ ಮರುಡಾಂಬರೀಕರಣದೊಂದಿಗೆ ರಸ್ತೆಯನ್ನು ತರಾತುರಿಯಿಂದ ಅಭಿವೃದ್ಧಿಗೊಳಿಸಲಾಗಿತ್ತು. ಚೆರ್ಕಳದಿಂದ ಉಕ್ಕಿನಡ್ಕವರೆಗಿರುವ ರಸ್ತೆ ಒಬ್ಬ ಗುತ್ತಿಗೆದಾರನಿಗೆ ಟೆಂಡರ್ ನೀಡಿದ್ದರೆ, ಅಲ್ಲಿಂದ ಮುಂದೆ ಅಡ್ಕಸ್ಥಳವರೆಗೆ ಇನ್ನೊಬ್ಬ ಗುತ್ತಿಗೆದಾರಗೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಆದರೆ, ಚೆರ್ಕಳದಿಂದ ಉಕ್ಕಿನಡ್ಕವರೆಗಿನ ಕಾಮಗಾರಿಯ ಅಂತಿಮ ಹಂತದ ಕೆಲಸ ಕಾರ್ಯ ಇನ್ನೂ ಪೂರ್ಣಗೊಳಿಸಿಲ್ಲ ಎಂಬ ದೂರು ವ್ಯಾಪಕಗೊಂಡಿದೆ.

ತಡೆಗೋಡೆ ನಿರ್ಮಾಣ ಅಗತ್ಯ

ಪಳ್ಳತ್ತಡ್ಕ ಪ್ರದೇಶದಲ್ಲಿ ಪ್ರತಿವರ್ಷ ರಸ್ತೆಯಲ್ಲಿ ಭಾರಿ ಪ್ರಮಾಣದ ಹೊಂಡಗಳುಂಟಾಗುತ್ತಿದ್ದು, ಇದಕ್ಕೆ ತೇಪೆ ಹಚ್ಚುವ ಕೆಲಸ ಮಾತ್ರ ನಡೆಯುತ್ತಿದೆ. ಇಲ್ಲಿ ರಸ್ತೆ ಅಂಚಿಗೆ ಸೂಕ್ತ ಚರಂಡಿ ನಿರ್ಮಿಸುವುದರ ಜತೆಗೆ ಭಾರಿ ಪ್ರಮಾಣದಲ್ಲಿ ಹರಿದು ಬರುವ ಮಳೆನೀರನ್ನು ರಸ್ತೆಗೆ ಹರಿಯದಂತೆ ತಡೆಗೋಡೆ ನಿರ್ಮಿಸಬೇಕಾದ ಅಗತ್ಯವಿದೆ. ಪಳ್ಳತ್ತಡ್ಕ ಸನಿಹದ ಪೆಲತ್ತಡಿ, ನೆಕ್ರಾಜೆ, ಚೆಡೆಕ್ಕಲ್ ಸೇರಿ ವಿವಿಧೆಡೆ ರಸ್ತೆ ಶಿಥಿಲಗೊಂಡಿದೆ. ಪ್ರತಿ ವರ್ಷ ಇಲ್ಲಿ ತೇಪೆಹಚ್ಚುವ ಕಾಮಗಾರಿ ಹೆಸರಲ್ಲಿ ಕಿರು ಗುತ್ತಿಗೆದಾರರಿಗೆ ಇಲಾಖೆ ಮೊತ್ತ ಪಾವತಿಸುತ್ತ ಬರುತ್ತಿದೆ.

ಮತ್ತೆ ಕುಸಿಯುವ ಆತಂಕ

ಕರಿಂಬಿಲದಲ್ಲಿ ಗುಡ್ಡದಿಂದ ನಿರಂತರ ಹರಿದು ಬರುವ ಒರತೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯನ್ನೂ ನಿರ್ಮಿಸದಿರುವುದರಿಂದ ರಸ್ತೆ ಅಪಾಯಕ್ಕೆ ಸಿಲುಕಿದೆ. ರಸ್ತೆ ಅಂಚಿಗೆ ಮನೆಯೊಂದಿದ್ದು, ಮನೆಯವರೂ ಅಪಾಯಕ್ಕೆ ಸಿಲುಕಿದ್ದಾರೆ. ಕನಿಷ್ಠ ನೂರು ಮೀ. ವರೆಗೆ ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಬೇಕಾದ ಅನಿವಾರ್ಯತೆಯಿದೆ. ಜತೆಗೆ ಸುಸಜ್ಜಿತ ಒಳಚರಂಡಿ ವ್ಯವಸ್ಥೆಯೂ ಆಗಬೇಕಾಗಿದೆ. ಮೇಲ್ನೋಟಕ್ಕೆ ಹಚ್ಚಹಸುರಿನ ಹೊದಿಕೆ ಗುಡ್ಡವನ್ನು ಆವರಿಸಿದ್ದರೂ, ಮೇಲ್ಭಾಗದ ರಬ್ಬರ್ ತೋಟದ ನಡುವೆ ಕಾಣಿಸಿಕೊಂಡಿರುವ ಬಿರುಕು ಯಾವುದೇ ಸಮಯದಲ್ಲೂ ಒಡೆದು ಮತ್ತೆ ಕುಸಿಯುವ ಆತಂಕ ಕಾಡುತ್ತಿದೆ. ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಮತ್ತೆ ಅಪಾಯ ಎದುರಾಗುವ ಸಾಧ್ಯತೆಯಿದೆ.

ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ಕಾಮಗಾರಿಯ ಕೊನೇ ಹಂತದ ಕೆಲಸ ಬಾಕಿಯಿದ್ದು, ಕಾಮಗಾರಿ ಶ್ರೀ ಪೂರ್ಣಗೊಳಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ. ಕರಿಂಬಿಲದಲ್ಲಿ ರಸ್ತೆ ಅಂಚಿನ ಗುಡ್ಡ ಕುಸಿತದ ಬಗ್ಗೆ ಸ್ಥಳ ಸಂದರ್ಶನ ನಡೆಸಿ ಅಗತ್ಯ ಕಾರ್ಯಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸಿ.ಜೆ.ಕೃಷ್ಣನ್ ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಗ ಮುಖ್ಯ ಅಭಿಯಂತ