ಜಿಲ್ಲೆ

ಶಿಥಿಲಾವಸ್ಥೆಯಲ್ಲಿ ಪಳ್ಳತ್ತಡ್ಕ ಸೇತುವೆ : ಅಪಾಯದಲ್ಲಿ ಅಂತಾರಾಜ್ಯ ಸಂಪರ್ಕ ರಸ್ತೆ : ಲೋಕೋಪಯೋಗಿ ಇಲಾಖೆಯಿಂದ ಜಾಗ್ರತಾ ಫಲಕ

ಸೌಮ್ಯ ಆರ್

ಪುರುಷೋತ್ತಮ ಪೆರ್ಲ ಕಾಸರಗೋಡು

ಅಂತಾರಾಜ್ಯ ಸಂಪರ್ಕದ ರಾಜ್ಯ ಹೆದ್ದಾರಿ ಚೆರ್ಕಳ- ಕಲ್ಲಡ್ಕ ರಸ್ತೆಯ ಪಳ್ಳತ್ತಡ್ಕ ಸೇತುವೆಯ ಶಿಥಿಲಾವಸ್ಥೆ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಸೂಚನಾಫಲಕ ಅಳವಡಿಸಿದ್ದಾರೆ. ಪಳ್ಳತ್ತಡ್ಕ ಸೇತುವೆ ನಾಲ್ಕು ವರ್ಷಕ್ಕೂ ಮೊದಲು ಶಿಥಿಲಾವಸ್ಥೆ ತಲುಪಿದ್ದರೂ ಇದಕ್ಕೆ ತೇಪೆ ಹಚ್ಚುವ ಕೆಲಸ ಇಲಾಖೆ ನಡೆಸುತ್ತಾ ಬಂದಿದೆ ಹೊರತು ಬದಲಿ ವ್ಯವಸ್ಥೆಗೆ ಮುಂದಾಗಿಲ್ಲ.

ಸೇತುವೆ ದೃಢತೆ ಬಗ್ಗೆ ತಪಾಸಣೆಗಾಗಿ ಲಕ್ಷಾಂತರ ರೂ. ವೆಚ್ಚ ನಡೆಸಿರುವ ಇಲಾಖೆ, ನಂತರ ತೇಪೆ ಹಚ್ಚಿ ಸುಮ್ಮನಾಗಿದೆ. ಸೇತುವೆ ತಳಭಾಗದಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಗಳು ತುಂಡಾಗಿ ಬೀಳುತ್ತಿದ್ದು, ತುಕ್ಕುಹಿಡಿದ ಕಬ್ಬಿಣ ಹೊರಬಂದು ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ತಳಭಾಗದ ಕಾಂಕ್ರೀಟ್ ಕಿತ್ತು ಶಿಥಿಲಾವಸ್ಥೆಯಲ್ಲಿದ್ದ ಸೇತುವೆಗೆ ಮೂರು ವರ್ಷದ ಹಿಂದೆ ತೇಪೆ ಹಚ್ಚುವ ಮೂಲಕ ತಾತ್ಕಾಲಿಕ ಕಾಮಗಾರಿ ನಡೆಸಲಾಗಿದ್ದರೂ ಸೇತುವೆ ಮತ್ತೆ ಅಪಾಯದಂಚಿನಲ್ಲಿದೆ.

ಕೇರಳ- ಕರ್ನಾಟಕ ಮಧ್ಯೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಖಾಸಗಿ, ಕೆಎಸ್ಸಾರ್ಟಿಸಿ ಬಸ್‌ಗಳು, ಭಾರಿ ಗಾತ್ರದ ಲಾರಿಗಳ ಸಹಿತ ನೂರಾರು ವಾಹನಗಳು ಈ ಹಾದಿಯಾಗಿ ಪ್ರತಿದಿನ ಸಂಚರಿಸುತ್ತಿರುವುದರಿಂದ ಶಿಥಿಲಾವಸ್ಥೆಯಲ್ಲಿರುವ ಸೇತುವೆ ಚಾಲಕರಲ್ಲಿ ಆತಂಕ ತಂದೊಡ್ಡಿದೆ.

ಸಾರ್ವಜನಿಕರಿಗೆ ಆತಂಕ

ಮೂರು ವರ್ಷಗಳ ಹಿಂದೆ ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಯ ಚೆರ್ಕಳದಿಂದ ಅಡ್ಕಸ್ಥಳವರೆಗಿನ 29 ಕಿ.ಮೀ. ರಸ್ತೆಯನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ನಡೆಸಲಾಗಿದ್ದರೂ ಇದರಲ್ಲಿ ಚೆರ್ಕಳದಿಂದ ಉಕ್ಕಿನಡ್ಕವರೆಗಿನ ಕಾಮಗಾರಿ ಗುತ್ತಿಗೆ ವಹಿಸಿಕೊಂಡವರು ಕಾಮಗಾರಿಯನ್ನು ಇನ್ನೂ ಪೂರ್ಣಗೊಳಿಸಿಲ್ಲ. ನಡೆಸಿರುವ ಕಾಮಗಾರಿಯೂ ಕಳಪೆಯಾಗಿದ್ದು, ಎಡನೀರು, ಚೇಡೆಕ್ಕಲ್, ಪಳ್ಳತ್ತಡ್ಕ ಸೇರಿದಂತೆ ವಿವಿಧೆಡೆ ರಸ್ತೆ ಹೇಳ ಹೆಸರಿಲ್ಲದಂತೆ ಹಾನಿಗೊಂಡಿದೆ. ಪಳ್ಳತ್ತಡ್ಕ ಸೇತುವೆ ಸನಿಹ ಉಂಟಾಗಿದ್ದ ಬೃಹತ್ ಹೊಂಡಗಳಿಂದ ವಾಹನ ಸಂಚಾರ ದುಸ್ತರಗೊಂಡಿದ್ದ ಹಿನ್ನೆಲೆಯಲ್ಲಿ ಊರವರು ಬೃಹತ್ ಪ್ರತಿಭಟನೆ ನಡೆಸಿದ್ದರು. ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ವೇಳೆಗೆ ಸೇತುವೆ ಪುನಃ ನಿರ್ಮಾಣದ ಬಗ್ಗೆ ಬೇಡಿಕೆ ಬಂದಿದ್ದರೂ ಅಧಿಕಾರಿಗಳು ಇದನ್ನು ಗಣನೆಗೆ ತೆಗೆದುಕೊಳ್ಳದೆ ಸೇತುವೆಗೆ ತೇಪೆ ಹಚ್ಚಿ ಕೈತೊಳೆದುಕೊಂಡಿದ್ದಾರೆ. ವಿಪರ್ಯಾಸವೆಂದರೆ ಹೊಸ ಸೇತುವೆ ಸನಿಹ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲಾಗಿರುವ ಹಳೇ ಸೇತುವೆ ಇನ್ನೂ ದೃಢವಾಗಿ ನಿಂತಿದೆ. ಮೂರು ದಶಕಗಳ ಹಿಂದೆ ನಿರ್ಮಿಸಿರುವ ಸೇತುವೆ ಶಿಥಿಲಗೊಂಡಿರುವುದು ಆತಂಕಕ್ಕೂ ಕಾರಣವಾಗಿದೆ.

ವಾಹನಗಳ ತಪಾಸಣೆ ಸರಿಯಾಗಿಲ್ಲ

ಮೇಲ್ನೋಟಕ್ಕೆ ಸೇತುವೆ ಸುಸ್ಥಿತಿಯಲ್ಲಿದ್ದರೂ ಸೇತುವೆಯ ಮೂರು ಸ್ಪ್ಯಾನ್‌ಗಳಲ್ಲಿ ಒಂದು ಅತ್ಯಂತ ಶಿಥಿಲಾವಸ್ಥೆಯಲ್ಲಿದೆ. ಸೇತುವೆಯ ತಳಭಾಗದ ಸ್ಲಾೃಬ್‌ನ ಚಪ್ಪಡಿ ಕಿತ್ತು ಬೀಳುತ್ತಿದೆ. ಭಾರಿ ವಾಹನಗಳ ಸಂಚಾರದ ಮಧ್ಯೆ ಜಾಗ್ರತೆ ಪಾಲಿಸುವಂತೆ ಲೋಕೋಪಯೋಗಿ ಇಲಾಖೆ ಸೇತುವೆ ವಿಭಾಗದ ಅಧಿಕಾರಿಗಳು ಸೇತುವೆ ಎರಡೂ ಭಾಗದಲ್ಲಿ ಫಲಕ ಅಳವಡಿಸಿದ್ದಾರೆ. ಈ ಮಧ್ಯೆ ಭಾರಿ ಗಾತ್ರದ ಟೋರಸ್ ಲಾರಿಗಳು ಹೆಚ್ಚಿನ ಪ್ರಮಾಣದ ಭಾರ ಹೇರಿಕೊಂಡು ಇದೇ ಹಾದಿಯಾಗಿ ನಿರಂತರ ಸಂಚರಿಸುತ್ತಿರುವುದರಿಂದ ರಸ್ತೆ ಹಾಗೂ ಸೇತುವೆ ಮತ್ತಷ್ಟು ಶಿಥಿಲಗೊಳ್ಳಲು ಕಾರಣವಾಗುತ್ತಿದೆ. ಅತಿಯಾದ ಭಾರ ಹೇರಿಕೊಂಡು ಸಾಗುವ ಭಾರಿ ವಾಹನಗಳ ತಪಾಸಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರು ವ್ಯಾಪಕಗೊಂಡಿದೆ.

ಸೇತುವೆ ಶಿಥಿಲಗೊಂಡಿದ್ದರೂ ವಾಹನ ಸಂಚಾರಕ್ಕೆ ಯಾವುದೇ ತೊಡಕುಂಟಾಗದು. ಹೆಚ್ಚಿನ ಭಾರ ಹೇರಿ ಸಾಗುವ ಭಾರಿ ವಾಹನಗಳ ಸಂಚಾರದ ಮಧ್ಯೆ ಚಾಲಕರು ಜಾಗ್ರತೆ ಪಾಲಿಸುವ ನಿಟ್ಟಿನಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಸೇತುವೆ ಶಿಥಿಲಾವಸ್ಥೆ ಬಗ್ಗೆ ತಜ್ಞರ ವರದಿ ಪ್ರಕಾರ ಹಳೇ ಸೇತುವೆ ತೆರವುಗೊಳಿಸಿ, ಈ ಪ್ರದೇಶದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಯೋಜನೆಯಿರಿಸಿಕೊಳ್ಳಲಾಗಿದೆ. ಭರತನ್ ಆರ್., ಸಹಾಯಕ ಅಭಿಯಂತ, ಲೋಕೋಪಯೋಗಿ ಇಲಾಖೆ, ಬದಿಯಡ್ಕ ವಿಭಾಗ https://www.vijayavani.net/vibrant-shikshana-chethana-award https://www.vijayavani.net/protest-171