ಜಿಲ್ಲೆ

ಕುಕ್ಕೆ ದೇಗುಲದಲ್ಲಿ ಪಲ್ಲಪೂಜೆ

Avinash R

ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಹಿನ್ನೆಲೆ ಗುರುವಾರ ಶ್ರೀ ದೇಗುಲದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಒಳಾಂಗಣದಲ್ಲಿ ಪಲ್ಲಪೂಜೆ ನೆರವೇರಿಸಿ, ಅಕ್ಷಯ ಪಾತ್ರೆಗೆ ಪೂಜೆ ಸಲ್ಲಿಸಿದರು. ಕುಕ್ಕೆಯಲ್ಲಿ ನಿರಂತರ ಅನ್ನದಾನ ನಡೆಯುತ್ತಿದ್ದು, ಜಾತ್ರಾ ಸಮಯದಲ್ಲಿ ವಿಶೇಷ ಭೋಜನ ಪ್ರಸಾದ ವಿತರಣೆಗಾಗಿ ಪಲ್ಲಪೂಜೆ ನೆರವೇರಿಸಲಾಯಿತು.

ಜಾತ್ರೋತ್ಸವದ ಪ್ರಧಾನ 4 ದಿನಗಳಾದ ಚೌತಿ, ಪಂಚಮಿ, ಷಷ್ಠಿ ಮತ್ತು ಅವಭೃತೋತ್ಸವದಂದು ವಿಶೇಷ ಅನ್ನದಾನ ನೆರವೇರುತ್ತದೆ. ಈ ಸಂಬಂಧವಾಗಿ ಅಂಗಡಿಗುಡ್ಡೆಯಲ್ಲಿ ನೂತನವಾಗಿ ನಿರ್ಮಿಸಿದ ಅನ್ನಛತ್ರ ಅನ್ನಪೂರ್ಣದಲ್ಲಿ ಪುರೋಹಿತ ಪ್ರಸನ್ನ ಹೊಳ್ಳ ಪೂಜೆ ನೆರವೇರಿಸಿದರು. ವಿವಿಧ ವೈದಿಕ ವಿಧಿವಿಧಾನಗಳ ಮೂಲಕ ಅನ್ನಬ್ರಹ್ಮನಿಗೆ ಪೂಜೆ ಸಲ್ಲಿಸಿ ಬಳಿಕ ಪ್ರಸಾದ ವಿತರಿಸಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ನಿರಂತರ ಅನ್ನದಾನ ನೀಡುವ ಕ್ಷೇತ್ರವಾದುದರಿಂದ ಚೌತಿ ದಿನ ಅನ್ನಪ್ರಸಾದಕ್ಕೆ ಪೂಜೆ ನೆರವೇರುತ್ತದೆ.

ಶ್ರೀ ದೇಗುಲದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ದೇಗುಲದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್​, ಶ್ರೀ ದೇವಳದ ದೇವಣ್ಣ ಗೌಡ, ಮಹಾಬಲೇಶ್ವರ ದೋಳ, ಪುರುಷೋತ್ತಮ, ಬಾಲಸುಬ್ರಹ್ಮಣ್ಯ ಮಾರರ್​, ಹೂವಪ್ಪ, ಭವಾನಿಶಂಕರ ದೇವರಗದ್ದೆ, ಎನ್​.ಸಿ.ಸುಬ್ಬಪ್ಪ, ನಿರಂಜನ ಭಟ್​, ಸ್ವಯಂಸೇವಕರಾದ ಮೋಹನದಾಸ ರೈ, ನವೀನ್​ ಕುಮಾರ್​ ಕೆ.ವಿ., ಪ್ರವಿಣ್​ ಕುಮಾರ್​ ಕೆ.ವಿ. ಸೇರಿದಂತೆ ದೇಗುಲದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.