ಜಿಲ್ಲೆ

ಶರಣರ ತತ್ವದಿಂದ ಜೀವನ ಸಾರ್ಥಕ

ಸೋಮನಾಥ ರೆಡ್ಡಿ

ಶಿರೋಳ: ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಶಿರೋಳ ಶಿವಯೋಗಾಶ್ರಮದ ಮಾತೆ ಅಕ್ಕಮಹಾದೇವಿ ಶರಣಮ್ಮನವರು ಹೇಳಿದರು.

ಗ್ರಾಮದ ಜನತಾ ಕಾಲನಿಯ ಶ್ರೀವೀರಭದ್ರೇಶ್ವರ ದೇವಸ್ಥಾನದ ಹನ್ನೊಂದನೇ ವಾರ್ಷಿಕೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಸಾಮೂಹಿಕ ವಿವಾಹಗಳ ನಿಮಿತ್ತ ಮಹಾ ದಾಸೋಹಿ ಕಲಬುರಗಿಯ ಶ್ರೀಶರಣಬಸವೇಶ್ವರ ಪುರಾಣ ಪ್ರವಚನ ಉದ್ಘಾಟಿಸಿ ಅವರು ಮಾತನಾಡಿದರು. ‘ಆಧುನಿಕ ಯುಗದಲ್ಲಿ ಸಂಸಾರದ ಜಂಜಾಟದಿಂದ ಮನುಷ್ಯರಿಗೆ ನೆಮ್ಮದಿ ಇಲ್ಲದಂತಾಗಿದೆ. ಹೀಗಾಗಿ ಮಠ-ಮಂದಿರಗಳಿಗೆ ಭೇಟಿ ನೀಡಿ ಪುರಾಣ ಪ್ರವಚನ ಆಲಿಸಬೇಕು’ ಎಂದರು.

ಚಿಂತಕ ಬಾಪುಗೌಡ್ರ ತಿಮ್ಮನಗೌಡ್ರ ಮಾತನಾಡಿ, ಮನುಷ್ಯನ ಭವರೋಗ ಕಳೆಯಲು ಅಧ್ಯಾತ್ಮ ಅವಶ್ಯ ಎಂದರು.

ವೀರಭದ್ರೇಶ್ವರ ದೇವಸ್ಥಾನದ ಗೌರವ ಅಧ್ಯಕ್ಷ ಶೇಖರಯ್ಯನವರು ಹಂಚಿನಮಠ, ಉತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಕಾಡಪ್ಪನವರ, ಉಪಾಧ್ಯಕ್ಷ ಶರಣಯ್ಯ ನಾಗಲೋಟಿಮಠ, ಕಾರ್ಯದರ್ಶಿ ನಂದೀಶ ಕರಕೀಕಟ್ಟಿ, ಸಹ ಕಾರ್ಯದರ್ಶಿ ರಾಜೇಸಾಬ ಚಳ್ಳಮರದ, ಲೋಕಪ್ಪ ಕರಕೀಕಟ್ಟಿ ಇತರರಿದ್ದರು. ಬಸವರಾಜ ಕುಪ್ಪಸ್ತ, ಮಲ್ಲಣ್ಣ ಚಿಕ್ಕನರಗುಂದ, ಗುರುನಾಥ ಮೆಣಸಗಿ, ಬಸವರಾಜ ಮಡಿವಾಳರ ಗುರುಪಾ ಭಜಂತ್ರಿ ಸಂಗೀತ ಸೇವೆ ಸಲ್ಲಿಸಿದರು.