ಜಿಲ್ಲೆ

ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸ : ಶಿಮ್ಲಾ ಬದಲಾಗಿ ಮಂಗಳೂರಿಗೆ : ಅಧ್ಯಯನದ ಹೆಸರಿನಲ್ಲಿ ಮೋಜು? ; ಉಡುಪಿ ಶ್ರೀಕೃಷ್ಣನ ದರ್ಶನಕ್ಕೂ ಒಲವು

Tumakuru

ತುಮಕೂರು : ಮಹಾನಗರ ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ ಪೌರಾಡಳಿತ ನಿರ್ದೇಶನಾಲಯ ಒಪ್ಪಿಗೆ ನೀಡಿದೆ. ಮಹಿಳಾ ಸದಸ್ಯರ ಜತೆ ಪತಿರಾಯರೂ ‘ಪಿಕ್‌ನಿಕ್’ಗೆ ಹೊರಟಿರುವ ಹಿನ್ನೆಲೆಯಲ್ಲಿ ಪ್ರವಾಸದ ವಿಷಯ ರಹಸ್ಯವಾಗಿಡಲಾಗಿದೆ.

ಪಾಲಿಕೆಯ 35 ಚುನಾಯಿತ ಸದಸ್ಯರು, 5 ನಾಮನಿರ್ದೇಶಿತ ಸದಸ್ಯರು ಹಾಗೂ 5 ಅಧಿಕಾರಿ, ಸಿಬ್ಬಂದಿಗೂ ಪ್ರವಾಸಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಒಟ್ಟು 45 ಜನ ಅಧಿಕೃತವಾಗಿ ಪ್ರವಾಸಕ್ಕೆ ಹೊರಟಿದ್ದಾರೆ. ಇವರೊಂದಿಗೆ ಮಹಿಳಾ ಸದಸ್ಯರ ಪತಿರಾಯರು, ಪುರುಷ ಸದಸ್ಯರ ಪತ್ನಿಯರೂ ಪ್ರವಾಸ ಹೊರಟಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಎಲ್ಲವೂ ಸರಿಯಾದರೆ ಇಂದಿನಿಂದ (ಮಾ.22) ಮಂಗಳೂರು, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸ ಆರಂಭವಾಗಲಿದ್ದು ಮಾ.24ರವರೆಗೆ ಸಾಗಲಿದೆ. ಮಂಗಳೂರು ಮಹಾನಗರ ಪಾಲಿಕೆ, ಉಡುಪಿ ನಗರಸಭೆ ಹಾಗೂ ಕಡೂರು ಘನತಾಜ್ಯ ಘಟಕ ಭೇಟಿಗೆ ಪ್ರವಾಸ ಅಧಿಕೃತವಾಗಿದೆ. ಕರೊನಾ ಸಂಕಷ್ಟದಲ್ಲಿಯೂ ಅಧ್ಯಯನ ಪ್ರವಾಸಕ್ಕೆ ಹೊರಟಿರುವ ಪಾಲಿಕೆ ತಂಡಕ್ಕೆ ಕೆಲವು ಷರತ್ತುಗಳನ್ನು ವಿಧಿಸಿರುವ ಪೌರಾಡಳಿತ ನಿರ್ದೇಶನಾಲಯ ಈ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ತುರ್ತು ಸಮಸ್ಯೆಗಳು ಉದ್ಭವಿಸಿದರೆ ಪ್ರವಾಸಕ್ಕೆ ತೆರಳುವವರೇ ಹೊಣೆಗಾರರಾಗಲಿದ್ದಾರೆ ಎಂಬ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಮೂರು ದಿನದ ಅಧ್ಯಯನ ಪ್ರವಾಸ ತೆರಳಲಿರುವ ತಂಡವು ಪೌರಾಡಳಿತ ನಿರ್ದೇಶನಾಲಯದ ಒಪ್ಪಿಗೆ ಪಡೆದಿರುವ ಮಂಗಳೂರು ಹಾಗೂ ಉಡುಪಿ, ಕಡೂರು ನಗರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಿಗೆ ಭೇಟಿ ನೀಡುವಂತಿಲ್ಲ. ಒಂದು ವೇಳೆ ಭೇಟಿ ನೀಡಿದರೆ ಅದರ ಖರ್ಚು-ವೆಚ್ಚವನ್ನು ಪ್ರವಾಸಕ್ಕೆ ತೆರಳಿರುವವರೇ ಭರಿಸಬೇಕಾಗಲಿದೆ.

ಅಧ್ಯಯನ ಪ್ರವಾಸಕ್ಕೆ 7ಲಕ್ಷ! : 2021-22ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಅನುದಾನದಲ್ಲೇ ಪ್ರವಾಸ ಖರ್ಚು-ವೆಚ್ಚ ತೂಗಿಸಿಕೊಳ್ಳಬೇಕು. ಇದಕ್ಕಿಂತ ಒಂದು ಪೈಸೆ ಹೆಚ್ಚು ಖರ್ಚು ಮಾಡುವಂತಿಲ್ಲ. ಅಧ್ಯಯನ ಪ್ರವಾಸದ ಬಳಿಕ ಖರ್ಚುವೆಚ್ಚಗಳ ಮಾಹಿತಿಯನ್ನು ದಾಖಲೆಗಳು, ರಸೀದಿ ಸಮೇತ ಪಾಲಿಕೆಯ ಲೆಕ್ಕಶಾಖೆಗೆ ಸಲ್ಲಿಸತಕ್ಕದ್ದು. ಪ್ರವಾಸ ವೆಚ್ಚದ ಕುರಿತು ಲೆಕ್ಕಪರಿಶೋಧಕರ ಆಕ್ಷೇಪಣಿಗಳಿಗೂ ಪ್ರವಾಸಕ್ಕೆ ತೆರಳುವವರೇ ಹೊಣೆ. ಪಾಲಿಕೆ ತಂಡ 2 ದಿನ ಪ್ರವಾಸ ನಡೆಸಲಿದ್ದು ವೈಜ್ಞಾನಿಕ ಕಸ ವಿಲೇವಾರಿ, ಮಳೆನೀರು ಕೊಯ್ಲು, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಉದ್ಯಾನವನಗಳ ಅಭಿವೃದ್ಧಿ ಹೀಗೆ ಎಲ್ಲವನ್ನೂ ಅಧ್ಯಯನ ಮಾಡುವ ಉದ್ದೇಶವಿದೆ.

ವೆಬ್‌ಸೈಟ್‌ನಲ್ಲಿ ದಾಖಲಾಗದ ವರದಿ? : ಅಧ್ಯಯನ ಪ್ರವಾಸ ಕುರಿತಂತೆ ವಿವರವಾದ ವರದಿಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಈ ಹಿಂದೆಯೇ ಇಲಾಖೆ ಸೂಚನೆ ನೀಡಿದ್ದರೂ ಈವರೆಗೆ ಯಾವುದೇ ವರದಿ ದಾಖಲಾದ ಉದಾಹರಣೆಯಿಲ್ಲ.

ಪತಿರಾಯರಿಗೆ ಅಪ್ಪಣೆ ಇಲ್ಲ, ಆದರೂ ಹೋಗ್ತ್ತಾರೆ! : 35 ಕಾರ್ಪೋರೇಟರ್‌ಗಳಲ್ಲಿ ಮಹಿಳಾ ಸದಸ್ಯರಿದ್ದು, ಇವರ ಜತೆ ಸಂಬಂಧಿಕರು ತೆರಳಲು ಪೌರಾಡಳಿತ ನಿರ್ದೇಶಾನಾಲಯ ಅವಕಾಶ ನೀಡಿಲ್ಲ. ಹಾಗಾಗಿ, ಈ ಬಾರಿ ಅಧ್ಯಯನ ಪ್ರವಾಸ ತೆರಳಲು ಉತ್ಸುಕರಾಗಿದ್ದ ಬಹುತೇಕ ಪತಿರಾಯರಿಗೆ, ಪ್ರಿಯ ಪತ್ನಿಯರಿಗೆ ಭಾರಿ ನಿರಾಸೆ ಆಗಿದೆ. ಒಂದು ವೇಳೆ ತಂಡದ ಜತೆ ತೆರಳಿದರೂ ಅವರೇ ಪ್ರವಾಸ ವೆಚ್ಚ ಭರಿಸಬೇಕಿದೆ. ರಾಮ, ಕೃಷ್ಣನ ಲೆಕ್ಕದಲ್ಲಿ ಎಲ್ಲವನ್ನೂ ಸರಿದೂಗಿಸುವ ಭರವಸೆ ಅಧಿಕಾರಿಗಳಿಂದ ಲಭಿಸಿದೆ ಎನ್ನಲಾಗಿದೆ.

ಮುನಿಸಿಗೆ ‘ಪ್ರವಾಸ’ ಮೇಯರ್ ಗಿಫ್ಟ್? : ಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮೇಯರ್ ವಿರುದ್ಧ ಮುನಿಸಿಕೊಂಡಿರುವ ಪಾಲಿಕೆ ಸದಸ್ಯರಿಗೆ ತರಾತುರಿಯಲ್ಲಿ ಪ್ರವಾಸ ಭಾಗ್ಯ ಕರುಣಿಸಲಾಗಿದೆ ಎಂಬ ಮಾತಿದೆ. ಈ ಮಾಸಾಂತ್ಯದೊಳಗೆ ಬಜೆಟ್ ಮಂಡನೆಯಾಗಬೇಕಿದ್ದು ಸದಸ್ಯರ ವಿಶ್ವಾಸ ಗಳಿಸುವ ಉದ್ದೇಶದಿಂದ ಪ್ರವಾಸ ಆಯೋಜಿಸಲಾಗುತ್ತಿದೆ ಎಂದು ಪ್ರವಾಸಕ್ಕೆ ತೆರಳದಿರಲು ನಿರ್ಧರಿಸಿರುವ ಪಾಲಿಕೆ ಸದಸ್ಯರೊಬ್ಬರು ತಿಳಿಸಿದರು.

ಬಜೆಟ್‌ನಲ್ಲಿ ಘೋಷಿಸಿದಂತೆ ಅಧ್ಯಯನ ಪ್ರವಾಸಕ್ಕೆ ಪೌರಾಡಳಿತ ನಿರ್ದೇಶಾನಾಲಯ ಅನುಮತಿ ನೀಡಿದೆ. ಪಾಲಿಕೆ ಸದಸ್ಯರು, ಅಧಿಕಾರಿಗಳು ತಂಡದಲ್ಲಿದ್ದಾರೆ. ಪ್ರವಾಸಕ್ಕೆ ದುಂದು ವೆಚ್ಚ ಮಾಡುತ್ತಿಲ್ಲ, ಎರಡು ದಿನದ ಪ್ರವಾಸಕ್ಕೆ ಬಜೆಟ್‌ನಲ್ಲಿ 7 ಲಕ್ಷ ರೂ. ಮೀಸಲಿಡಲಾಗಿದ್ದು ಇನ್ನೂ ದಿನಾಂಕ ನಿಗದಿಯಾಗಿಲ್ಲ. ರೇಣುಕಾ, ಪಾಲಿಕೆ ಆಯುಕ್ತೆ