ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್,ಉಪಮೇಯರ್ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಮೇಯರ್ ಆಗಿ ಬಿಜೆಪಿಯ ಸವಿತಾ ಕಾಂಬಳೆ ಅವರು ಅವಿರೋಧವಾಗಿ ಆಯ್ಕೆಯಾದರು. ಈ ಬಾರಿ ಸರ್ಕಾರದ ಮೀಸಲಾತಿ ಎಫೆಕ್ಟ್‌ನಿಂದಾಗಿ 2018ರ ಬಳಿಕ ಪಾಲಿಕೆಯಲ್ಲಿ ಕನ್ನಡಿಗರಿಗೊಬ್ಬರಿಗೆ ಮೇಯರ್ ಸ್ಥಾನ ಒಲಿದು ಬಂದಿರುವುದು ವಿಶೇಷವಾಗಿದೆ.
ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಗುರುವಾರ ಪಾಲಿಕೆಯ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆ ಪ್ರಕ್ರಿಯೇಗಳು ನಡೆದವು. ಮೇಯರ್ ಆಯ್ಕೆ ಬಯಸಿ ಬಿಜೆಪಿ ಸವಿತಾ ಕಾಂಬಳೆ, ಲಕ್ಷ್ಮೀ ರಾಠೋಡ ಅವರು ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಲಕ್ಷ್ಮೀ ರಾಠೋಡ ಅವರು ನಾಮಪತ್ರವನ್ನು ಹಿಂಪಡೆದರು. ಹಾಗಾಗಿ ಚುನಾವಣೆ ಅಧಿಕಾರಿ ಸಂಜಯ ಶೆಟ್ಟಣವರ ಅವರು ಸವಿತಾ ಕಾಂಬಳೆ ಅವರನ್ನು ಮೇಯರ್ ಆಗಿ ಘೋಷಣೆ ಮಾಡಿದರು.
ಉಪಮೇಯರ್ ಆಯ್ಕೆಗೆ ಬಿಜೆಪಿ ಆನಂದ ಚೌವ್ಹಾಣ ಹಾಗೂ ಕಾಂಗ್ರೆಸ್‌ನ ಜ್ಯೋತಿ ಕಡೋಲ್ಕರ್ ಅವರು ಸ್ಪರ್ಧಿಸಿದ್ದರಿಂದ ಮತಕ್ಕೆ ಹಾಕಲಾಯಿತು. ಈ ವೇಳೆ ಕೈ ಎತ್ತುವ ಮೂಲಕ ನಡೆದ ಮತದಾನದಲ್ಲಿ ಬಿಜೆಪಿ ಆನಂದ ಚೌವ್ಹಾಣ-39 ಮತ ಪಡೆಯುವ ಮೂಲಕ ಆಯ್ಕೆಯಾದರು. ಕಾಂಗ್ರೆಸ್‌ನ ಜ್ಯೋತಿ ಕಡಲ್ಕೋರ್-20 ಮತಗಳನ್ನು ಪಡೆದುಕೊಂಡರು.