ಜಿಲ್ಲೆ

ಹಿರಿಯರಿಗೆ ಮನೆಬಾಗಿಲಿಗೆ ಉಪಶಮನ ಆರೈಕೆ : ಸರ್ ಸಿ.ವಿ. ರಾಮನ್ ಆಸ್ಪತ್ರೆ ಹೊಸ ಹೆಜ್ಜೆ

ಪಂಕಜ ಕೆ.ಎಂ.

ಪಂಕಜ ಕೆ.ಎಂ. ಬೆಂಗಳೂರು

ಕ್ಯಾನ್ಸರ್, ಹೃದ್ರೋಗ ಸೇರಿ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯುಳ್ಳ ಹಿರಿಯ ನಾಗರಿಕರ ಮನೆಬಾಗಿಲಿಗೆ ಉಪಶಮನ ಆರೈಕೆ (ಪ್ಯಾಲಿಯೇಟಿವ್ ಕೇರ್) ಉಚಿತ ಸೌಲಭ್ಯ ಒದಗಿಸಲು ನಗರದ ಸರ್ ಸಿ.ವಿ. ರಾಮನ್ ಆಸ್ಪತ್ರೆ ಮುಂದಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಿವುಡುತನ ತಡೆಯುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಪಿಸಿಡಿ) ನೆರವಿನೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಸರ್ಕಾರಿ ಸ್ವಾಮ್ಯದಲ್ಲಿ ಈ ರೀತಿಯ ಚಿಕಿತ್ಸೆ ಮತ್ತು ಸೇವೆಯನ್ನು ನೀಡುತ್ತಿರುವ ರಾಜ್ಯದ ಮೊದಲ ಆಸ್ಪತ್ರೆ ಎನಿಸಿದೆ.

ಮೊದಲಿಗೆ ಆಸ್ಪತ್ರೆಯ ಸುತ್ತಮುತ್ತಲ (15-20 ಕಿ.ಮೀ.) ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ಶಿಬಿರಗಳನ್ನು ಆಯೋಜಿಸಿ ನಾನಾ ಆರೋಗ್ಯ ಸಮಸ್ಯೆಗಳಿಂದ ಬಳಲುವವರಿಗೆ ನೋವು ನಿವಾರಕ ಔಷಧ ಮತ್ತು ಚಿಕಿತ್ಸೆ ನೀಡಲಾಗುವುದು. ವಿವಿಧ ಮೂಳೆ ಸಂಬಂಧಿ ಸಮಸ್ಯೆ ಹೊಂದಿರುವವರಿಗೆ ಫಿಜಿಯೋಥೆರಪಿಯನ್ನೂ ಮಾಡಲಾಗುವುದು. ಅದಕ್ಕಾಗಿ ನುರಿತ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸಲಿದೆ.

ಈ ಕಾರ್ಯಕ್ರಮದ ಯಶಸ್ಸಿಗಾಗಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ವ್ಯಾನ್ ನೀಡಲಾಗುತ್ತಿದ್ದು, ಅದನ್ನು ಬಳಸಿಕೊಂಡು ವೈದ್ಯಕೀಯ ಉಪಕರಣಗಳು ಹಾಗೂ ಔಷಧಗಳೊಂದಿಗೆ ನುರಿತ ವೈದ್ಯ ಸಿಬ್ಬಂದಿ ರೋಗಿಗಳ ಮನೆಬಾಗಿಲಿಗೆ ತೆರಳಿ ಸೇವೆ ನೀಡಲಿದೆ. ತುರ್ತು ನಿಗಾ ಘಟಕದ ಅಗತ್ಯ ಇದ್ದವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ರಾಜೇಶ್ ತಿಳಿಸಿದ್ದಾರೆ.

ಕ್ಯಾನ್ಸರ್ ಸೇರಿ ನಾನಾ ಆರೋಗ್ಯ ಸಮಸ್ಯೆ ಹೊಂದಿರುವ ರೋಗಿಗಳ ಆರೈಕೆಗಾಗಿ ‘ಒನ್ ಬಿಲಿಯನ್ ಲಿಟರೇಟ್ ಫೌಂಡೇಷನ್’ (ಒಬಿಎಲ್‌ಎಫ್) ಎಂಬ ಸಂಸ್ಥೆ ಸಹಯೋಗದಲ್ಲಿ ಪ್ಯಾಲಿಯೇಟಿವ್ ಕೇರ್ ಕೇಂದ್ರ (ಉಪಶಮನ ಚಿಕಿತ್ಸಾ ಕೇಂದ್ರ) ತೆರೆಯಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ತಲಾ 5 ಹಾಸಿಗೆಯಂತೆ ಪ್ರತ್ಯೇಕ ವಾರ್ಡ್‌ಗಳಿವೆ. ಅಲ್ಲಿ ಹಿರಿಯ ನಾಕರಿಕರು ಉತ್ತಮ ಆರೈಕೆ ಲಭಿಸಲಿದೆ ಎಂದಿದ್ದಾರೆ.

ಜಿರಿಯಾಟ್ರಿಕ್ ವಿಭಾಗ

ಚಿಲ್ಡ್ರನ್ ಹೆಲ್ತ್ ಫೌಂಡೇಶನ್ ಸಹಯೋಗದಲ್ಲಿ 13 ಹಾಸಿಗೆಗಳ ಜಿರಿಯಾಟ್ರಿಕ್ ವಿಭಾಗ ಸಹ ಆರಂಭಿಸಲಾಗಿದ್ದು, ಹಿರಿಯ ನಾಗರಿಕರಿಗೆ ಪೂರಕವಾಗಿ ವಾರ್ಡ್ ಸಿದ್ಧಪಡಿಸಲಾಗಿದೆ. ಇದಕ್ಕೂ ಫೌಂಡೇಶನ್ ವತಿಯಿಂದಲೇ ಮಾನವ ಸಂಪನ್ಮೂಲ ಒದಗಿಸಲಾಗಿದೆ ಎಂದು ಡಾ.ಕೆ.ಎಸ್. ರಾಜೇಶ್ ತಿಳಿಸಿದರು.

800 ಹೊರ ರೋಗಿಗಳು

ಆಸ್ಪತ್ರೆಯು 250 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಸಾಮಾನ್ಯ ಶಸಚಿಕಿತ್ಸಾ ಕೊಠಡಿಯೊಂದಿಗೆ ಮಾಡ್ಯೂಲರ್ ಒ.ಟಿ. ಸಹ ಇದೆ. ಐಸಿಯು ಘಟಕ, ಡಯಾಲಿಸಿಸ್ ಘಟಕ ಸಹ ಕಾರ್ಯನಿರ್ವಹಿಸುತ್ತಿವೆ. ನಿತ್ಯ 700- 800 ಹೊರರೋಗಿಗಳು ಹಾಗೂ 250 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಕ್ರಮ ವಹಿಸಲಾಗಿದೆ ಡಾ. ರಾಜೇಶ್ ಹೇಳಿದರು.

ಕೋಟ್:

ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುವವರು ದಿನಗೂಲಿ ನೌಕರರಾಗಿರುವುದರಿಂದ ಹಿರಿಯ ನಾಗರಿಕರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವಸ್ಟು ಹಣ ಮತ್ತು ಸಮಯ ಎರಡೂ ಇರುವುದಿಲ್ಲ. ಹೀಗಾಗಿ ರೋಗಿಗಳು ನೋವಿನಲ್ಲಿ ನರಳುತ್ತಿರುತ್ತಾರೆ. ಅಂತಹವರಿಗೆ ಚಿಕಿತ್ಸೆ ನೀಡಿ ನೋವು ಉಪಶಮನಗೊಳಿಸಲು ಮನೆಬಾಗಿಲಿಗೆ ಪ್ಯಾಲಿಯೇಟಿವ್ ಕೇರ್ ಒದಗಿಸಲಾಗುತ್ತಿದೆ.

-ಡಾ. ಕೆ.ಎಸ್. ರಾಜೇಶ್, ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ