ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಕಲ್ಯಾಣ ಕ್ರಾಂತಿ ವಿಜಯೋತ್ಸವ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಚನ ಸಾಹಿತ್ಯದ ಪಲ್ಲಕ್ಕಿಗೆ ಪೂಜೆ ನೆರವೇರಿಸಿದರು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಸಂಸದ ಸಾಗರ್ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಇತರರಿದ್ದರು. 
ಜಿಲ್ಲೆ

ಸಮಾನತೆಗಾಗಿ ಶರಣರ ಹೋರಾಟ

ಭಾಲ್ಕಿ: ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಮನುಕುಲದ ಸಮಾನತೆಗಾಗಿ ಹೋರಾಟ ನಡೆಸಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ವಚನ ಸಾಹಿತ್ಯದ ಪಲ್ಲಕ್ಕಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಶರಣರು ಜಾತಿ ವ್ಯವಸ್ಥೆ, ಕಂದಾಚಾರ, ಮೌಢ್ಯತೆ ವಿರುದ್ಧ ಸಮರ ಸಾರಿದ್ದರು. ಅಂತರ್ಜಾತಿ ವಿವಾಹ ನಡೆಸಿ ಮನುಕುಲ ಒಂದೇ ಎಂಬುದನ್ನು ಸಾರಿದರು. ಇದು ಕಲ್ಯಾಣ ಕ್ರಾಂತಿಗೆ ಕಾರಣವಾಯಿತು. ಮಹಾನವಮಿ ದಿನದಂದು ಶರಣರು ಎಳಹೋಟಿ ಶಿಕ್ಷೆ ಅನುಭವಿಸಿದರು. ಶರಣರ ಮೇಲೆ ದಬ್ಬಾಳಿಕೆ, ಹತ್ಯೆ ನಡೆಯಿತು. ಆದರೂ ಶರಣರು ಯಾವುದಕ್ಕೂ ಭಯ ಪಡದೇ ಎಲ್ಲವನ್ನೂ ಮೆಟ್ಟಿನಿಂತೂ ವಿಜಯೋತ್ಸವ ಸಾರಿದರು ಎಂದು ಹೇಳಿದರು.

ಬಸವ ಗುರುವಿನ ಪೂಜೆ ನೆರವೇರಿಸಿದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಮನುಕುಲದ ಸಾರ್ಥಕ ಜೀವನಕ್ಕೆ ಬಸವಾದಿ ಶರಣರ ವಚನ ಸಾಹಿತ್ಯ ಪೂರಕವಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್​ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರು ತತ್ವ ಸಿದ್ದಾಂತಕ್ಕಾಗಿ ಹೋರಾಟ ನಡೆಸಿದರು. ಸಮಾನತೆ, ಜಾತಿ ರಹಿತ ಸಮಾಜ ಕಟ್ಟುವ ಪ್ರಯತ್ನ ಮಾಡಿದರು. ವಚನ ಸಾಹಿತ್ಯದ ರಕ್ಷಣೆಗಾಗಿ ಹೋರಾಟ ನಡೆಸಿದರು ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರು ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯದ ಮೆರವಣಿಗೆ ನಡೆಸಿ ಹೊಸ ಪರಂಪರೆಗೆ ನಾಂದಿ ಹಾಡಿದರು. ಅದನ್ನು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ ಎಂದರು.

ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಅನಿಲ ಮಹಾರಾಜರು, ಶ್ರೀ ಶಂಕರಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಸಂಸದ ಸಾಗರ್ ಖಂಡ್ರೆ, ಶಶಿಧರ ಕೋಸಂಬೆ, ಬಸವರಾಜ ಮರೆ, ಸಂಗಮೇಶ ಹುಣಜೆ ಮದಕಟ್ಟಿ, ರವೀಂದ್ರ ಚಿಡಗುಪ್ಪೆ, ರಾಜಕುಮಾರ ಬಿರಾದಾರ್, ಕಾಶಿನಾಥ ಲದ್ದೆ, ಮಲ್ಲಮ್ಮ ನಾಗನಕೇರೆ, ಚಂದ್ರಕಲಾ ಪ್ರಭು ಡಿಗ್ಗೆ ಇತರರಿದ್ದರು. ದೀಪಕ ಠಮಕೆ ನಿರೂಪಣೆ ಮಾಡಿ ವಂದಿಸಿದರು.

ವಚನ ಪಾರಾಯಣ: ವಿದಾರ್ಥಿನಿಯರಾದ ಶ್ರಾವ್ಯ ಸುರೇಶ, ವಿಶ್ವಜ್ಯೋತಿ ಪ್ರಭು, ವಚನಾಂಬಿಕಾ ಜಗದೀಶ, ಐಶ್ವರ್ಯ ಪ್ರಕಾಶ, ಮಹೇಶ್ವರಿ ಶಿವು, ಆರಾಧ್ಯ ಆನಂದ, ಐಶ್ವರ್ಯ ಅಶೋಕ, ಸುಸ್ಮಿತಾ ಸಂಗಮೇಶ, ಸಂಜನ ಸೂರಜ್, ಶ್ರದ್ಧಾ ಸಂತೋಷ, ಆದಿತ್ಯ ಶಶಿಧರ, ಓಂಪ್ರಕಾಶ ಸಂಗಮೇಶ ವಚನ ಪಾರಾಯಣ ನಡೆಸಿ ಕೊಟ್ಟರು.

ಮೈಸೂರು ದಸರಾ ಜಂಬು ಸವಾರಿಯಲ್ಲಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಸ್ತಬ್ದಚಿತ್ರ ಪ್ರದರ್ಶನಗೊಂಡಿರುವುದು ಅತ್ಯಂತ ಖುಷಿ ತಂದು ಕೊಟ್ಟಿದೆ. ಮುಂಬರುವ ದಿನಗಳಲ್ಲಿ ನವದೆಹಲಿ ಪರೇಡ್‌ನಲ್ಲಿ ಪೂಜ್ಯರ ಸ್ತಬ್ದಚಿತ್ರ ಪರ್ದರ್ಶನಗೊಂಡರೆ ಮತ್ತಷ್ಟು ಮೆರಗು ಬರಲಿದೆ.
| ಶ್ರೀ ಗುರುಬಸವ ಪಟ್ಟದ್ದೇವರು, ಹಿರೇಮಠ ಸಂಸ್ಥಾನ ಭಾಲ್ಕಿ