ಜಿಲ್ಲೆ

ಕುಕ್ಕೆಯಲ್ಲಿ ಹೊರಾಂಗಣ ಪ್ರವೇಶಿಸಿದ ದೇವರು: ದೇವಳದಲ್ಲಿ ಪಾಲಕಿ, ಬಂಡಿ, ಮಂಟಪೋತ್ಸವ ಸೇವೆಗಳು ಆರಂಭ : ಲಕ್ಷದೀಪ ನಂತರ ರಥೋತ್ಸವ ಪ್ರಾರಂಭ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಬುಧವಾರ ಶ್ರೀ ಸುಬ್ರಹ್ಮಣ್ಯ ದೇವರು ಹೊರಾಂಗಣ ಪ್ರವೇಶಿಸಿದರು. ಬಳಿಕ ದೀಪಾವಳಿ ಪ್ರಯುಕ್ತ ದೇವರ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿತು.

ಅರ್ಚಕ ರಾಜೇಶ್ ನಡ್ಯಂತಿಲ್ಲಾಯ ಉತ್ಸವದ ವಿಧಿವಿಧಾನ ನೆರವೇರಿಸಿದರು. ಈ ಮೂಲಕ ಕ್ಷೇತ್ರದಲ್ಲಿ ದೇವರ ಹೊರಾಂಗಣ ವರ್ಷಾವಧಿ ಉತ್ಸವಗಳು ಆರಂಭವಾಯಿತು. ಆರಂಭದಲ್ಲಿ ಲಕ್ಷ್ಮೀ ಪೂಜೆ ನೆರವೇರಿತು. ಇನ್ನು ಮುಂದೆ ದೇವಳದಲ್ಲಿ ದೇವರ ಪಾಲಕಿ ಉತ್ಸವ, ಬಂಡಿ ಉತ್ಸವ ಹಾಗೂ ಮಂಟಪೋತ್ಸವ ಸೇವೆಗಳು ನಡೆಯುತ್ತವೆ. ಮುಂದೆ ಬರುವ ಲಕ್ಷದೀಪೋತ್ಸವ ನಂತರ ರಥಬೀದಿಯಲ್ಲಿ ರಥೋತ್ಸವಗಳು ನಡೆಯಲಿವೆ.

ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯೆ ಸೌಮ್ಯಾ ಭರತ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಳ ಅಧೀಕ್ಷಕ ಗೋಪಿನಾಥ್ ನಂಬೀಶ, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್., ದೇವಳ ಸಿಬ್ಬಂದಿ ಮತ್ತು ಭಕ್ತರು ಉಪಸ್ಥಿತರಿದ್ದರು.

ಷಷ್ಠಿ ಪ್ರಧಾನ: ನಾಡಿನ ಉಳಿದ ದೇವಾಲಯಗಳಲ್ಲಿ ಪತ್ತನಾಜೆಯಂದು ಕೊನೆಯ ಉತ್ಸವವಾಗಿ ಉತ್ಸವಮೂರ್ತಿ ಗರ್ಭಗುಡಿಯನ್ನು ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗುತ್ತವೆ. ಆದರೆ ಕುಕ್ಕೆಯಲ್ಲಿ ಮಾತ್ರ ಜೇಷ್ಠ ಶುದ್ಧಷಷ್ಠಿಯಂದು ಕೊನೆಯ ಉತ್ಸವ ನಡೆದು, ದೀಪಾವಳಿಯ ಬಲಿಪಾಡ್ಯಮಿಯಂದು ಉತ್ಸವ ಆರಂಭವಾಗುತ್ತದೆ.

ದೀಪಾರಾಧನೆಯುಕ್ತ ಉತ್ಸವ

ಬುಧವಾರ ದೇವರ ಮಹಾಪೂಜೆ ಬಳಿಕ ದೇವರು ಹೊರಾಂಗಣ ಪ್ರವೇಶಿಸಿದರು. ನಂತರ ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ದೇವರ ಉತ್ಸವಾದಿಗಳು ನೆರವೇರಿತು. ಆರಂಭದಲ್ಲಿ ದೀಪಾರಾಧನೆಯುಕ್ತ ದೇವರ ಬಂಡಿ ರಥೋತ್ಸವ ನೆರವೇರಿತು. ನಂತರ ಭಜನೆ ಸುತ್ತು, ನಾಗಸ್ವರ, ಬ್ಯಾಂಡ್, ವಾದ್ಯಗಳನ್ನು ಒಳಗೊಂಡ ದೀಪಾರಾಧನೆಯುಕ್ತ ಪಾಲಕಿ ಉತ್ಸವ ಸಂಪನ್ನವಾಯಿತು. ಕಾರ್ತಿಕ ಮಾಸದಲ್ಲಿ ಬರುವ ಲಕ್ಷ ದೀಪೋತ್ಸವದ ನಂತರ ರಥಬೀದಿಯಲ್ಲಿ ರಥೋತ್ಸವ ಆರಂಭಗೊಳ್ಳಲಿದೆ.