ಶಿವಮೊಗ್ಗ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣೇಶೋತ್ಸವ ಮೆರವಣಿಗೆ ವೇಳೆ ಪಾಕಿಸ್ತಾನದ ಮನಸ್ಥಿತಿ ಇರುವವರು ಗಲಭೆ ನಡೆಸಿ ಶಾಂತಿ ಕದಡಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಾಗಮಂಗಲದಲ್ಲಿ ನಡೆದ ಗಲಾಟೆ ಸಂಬಂಧ ಗುರುವಾರ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗಣಪತಿ ಮೆರವಣಿಗೆ ನಡೆಸುವ ಸಂದರ್ಭ ಗಲಾಟೆ ಮಾಡಲಾಗಿದೆ. ಮಸೀದಿ ಎದುರು ಮೆರವಣಿಗೆ ಹೋಗಬಾರದು. ಡೊಳ್ಳು ಬಾರಿಸಬಾರದು. ಮಂಗಳವಾದ್ಯ ನುಡಿಸಬಾರದು ಎಂದು ಮುಸ್ಲಿಂ ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ಎಸೆದಿದ್ದಾರೆ. ಪೆಟ್ರೋಲ್ ಬಾಂಬ್ ಎಸೆದು ದೇಶದ್ರೋಹಿ ಕೃತ್ಯವೆಸಗಿದ್ದಾರೆ ಎಂದು ಕಿಡಿಕಾರಿದರು.
ಎನ್‌ಡಿಎ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಈ ರೀತಿ ಕೃತ್ಯಗಳು ಕಡಿಮೆಯಾಗಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಪಾಕಿಸ್ತಾನ ಮನಸ್ಥಿತಿ ಇರುವವರು ಪದೇಪದೆ ದುಷ್ಕೃತ್ಯ ಮಾಡುತ್ತಲೇ ಇದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಪ್ರಶ್ನೆಯೇ ಇಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನದೆ ಎಲ್ಲ ರಾಷ್ಟ್ರಭಕ್ತರು ದೇಶದ್ರೋಹಿ ಕೃತ್ಯವನ್ನು ಖಂಡಿಸಬೇಕು. ಕೃತ್ಯವೆಸಗಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.