ಬೆಂಗಳೂರು: ಪಾಕಿಸ್ತಾನದ ರಾಷ್ಟ್ರಧ್ವಜ ಹೋಲುವ ಬಾವುಟವನ್ನು ಕಾರಿಗೆ ಸಿಕ್ಕಿಸಿಕೊಂಡು ಹೋಗುತ್ತಿದ್ದ ಕಾರು ಚಾಲಕನಿಗೆ ಎಲೆಕ್ಟ್ರಾನಿಕ್ಸ್ ಸಿಟಿ ಸಂಚಾರ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಸೆ.8ರಂದು ಬೆಳಗ್ಗೆ 11.45ರಲ್ಲಿ ಹೊಸೂರು ರಸ್ತೆಯ ವೀರಸಂದ್ರ ಸರ್ಕಲ್ನಲ್ಲಿ ತಮಿಳುನಾಡು ಮೂಲದ ಫಾರ್ಚುನರ್ ಕಾರು ನಿಂತಿತ್ತು. ಪಾಕಿಸ್ತಾನ ರಾಷ್ಟ್ರಧ್ವಜಕ್ಕೆ ಹೋಲುವ ಬಾವುಟ ಅಳವಡಿಸಿರುವುದು ಸಿಬ್ಬಂದಿ ಗಮನಕ್ಕೆ ಬಂದಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಎಎಸ್ಐ ರಾಜು ಅವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಹಸಿರುಬಣ್ಣದ ಬಾವುಟ ಕಂಡು ಬಂದಿದೆ.
ಈ ವೇಳೆ ಚಾಲಕನನ್ನು ಕಾರಿನಿಂದ ಕೆಳಗಿಳಿಸಿ ಬಾವುಟ ತೆಗೆಸಿದ್ದಾರೆ. ಬಳಿಕ ರಾಷ್ಟ್ರಧ್ವಜವನ್ನು ಹಾಕಿಸಿ, ಇನ್ನೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.