ಜಿಲ್ಲೆ

ಪಾಕ್, ಬಾಂಗ್ಲಾದಲ್ಲಿಲ್ಲದ ಕಾಯ್ದೆ ನಮಗೇಕೆ?

ಎನ್.ವೆಂಕಟೇಶ್

ವಕ್ಫ್ ನಿಷೇಧಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ ದೇಶಗಳು ಒಂದಾಗಿದ್ದಾಗ ಇದ್ದ ಕಾನೂನಿನ ಅವಶ್ಯಕತೆಯಿಲ್ಲ

ಶಿಡ್ಲಘಟ್ಟ: ವಕ್ಫ್ ಬೋರ್ಡನ್ನು ಕೂಡಲೇ ನಿಷೇಧಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ತಾಲೂಕಿನ ಬೆಳ್ಳೂಟಿ ಗ್ರಾಮದ ಬಳಿಯಿರುವ ಪುರಾತನ ಕಾಲದ ಆಂಜನೇಯ ಸ್ವಾಮಿ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ಒಂದಾಗಿದ್ದ ದೇಶ 1947ರಲ್ಲಿ ಸ್ವತಂತ್ರಗೊಂಡ ನಂತರ ಹಿಂದುಸ್ತಾನ ಹಾಗೂ ಪಾಕಿಸ್ತಾನವಾಗಿ ಪ್ರತ್ಯೇಕಗೊಂಡಿತು. ನಂತರ 1971ರಲ್ಲಿ ಬಾಂಗ್ಲಾದೇಶ ರೂಪುಗೊಂಡಿತು. ದೇಶಗಳು ಒಂದಾಗಿದ್ದಾಗ ಇದ್ದ ವಕ್ಫ್ ಕಾಯ್ದೆ ಇಂದೂ ಭಾರತದಲ್ಲಿದ್ದರೆ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿಲ್ಲ. ಆ ದೇಶಗಳಿಲ್ಲಿಲ್ಲದ ಕಾಯ್ದೆಗಳು ನಮಗೇಕೆ. ಹಾಗಾಗಿ ಕೂಡಲೇ ವಕ್ಫ್ ರದ್ದುಗೊಳಿಸಬೇಕು ಎನ್ನುವುದು ಬಿಜೆಪಿಯ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಮೂರು ತಂಡಗಳಾಗಿ ಪ್ರವಾಸ ಕೈಗೊಂಡು ವಕ್ಫ್ ನೋಟಿಸ್‌ನಿಂದ ಗೊಂದಲಕ್ಕೆ ಸಿಲುಕಿರುವವರ ಅಹವಾಲು ಸ್ವೀಕರಿಸುವ ಜತೆಗೆ ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಗಟ್ಟಿ ಧ್ವನಿ ಎತ್ತಲಾಗುವುದು ಎಂದರು.

ಕೋಲಾರ ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ವೈ.ಎ. ನಾರಾಯಣಸ್ವಾಮಿ, ಮುಖಂಡರಾದ ದೇವನಹಳ್ಳಿ ಗೋಪಿ, ಸುರೇಂದ್ರಗೌಡ, ಸೀಕಲ್ ಆನಂದಗೌಡ ಮತ್ತಿತರರು ಹಾಜರಿದ್ದರು.

ಯೋಗ್ಯತೆ ಇಲ್ಲದವರೇ ಸಚಿವರು

ಡಾಕ್ಟರ್ ಅಲ್ಲದವ ರಾಜ್ಯದ ಆರೋಗ್ಯ ಸಚಿವ, ಇನ್ನು ವಿದ್ಯೆ ಇಲ್ಲದವ, ಕನ್ನಡ ಬಾರದ ವ್ಯಕ್ತಿ ವಿದ್ಯಾಮಂತ್ರಿ ಎಂದು ಮೂದಲಿಸಿದ ಛಲವಾದಿ ನಾರಾಯಣಸ್ವಾಮಿ, ಯೋಗ್ಯತೆ ಇಲ್ಲದವರನ್ನು ಮಂತ್ರಿ ಮಾಡಿರುವುದರಿಂದಲೇ ನಿರಂತರವಾಗಿ ಅಮಾಯಕ ಬಾಣಂತಿಯರು ಹಾಗೂ ಹಸುಗೂಸುಗಳ ಸಾವುಗಳು ಸಂಭವಿಸುತ್ತಿವೆ. ದಿನೇಶ್ ಗುಂಡೂರಾವ್ ಅವರಿಗೆ ನಾಚಿಕೆ ಆಗಬೇಕು. ನೈತಿಕತೆ ಇದ್ದಲ್ಲಿ ಈಗಾಗಲೇ ರಾಜೀನಾಮೆ ನೀಡಬೇಕಿತ್ತು. ಎಂದರು.

ಮುಸ್ಲಿಮರಿಲ್ಲದ ಗ್ರಾಮಕ್ಕೂ ಕಾಲಿಟ್ಟ ವಕ್ಫ್

ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯ ಪುರಾತನ ಕಾಲದಿಂದ ಇದ್ದು, ಈಗ ದೇವಾಲಯದ ಜಾಗ ವಕ್ಫ್‌ಗೆ ಸೇರಿಸಿರುವುದು ಖಂಡನೀಯ. ವಿಶೇಷವೆಂದರೆ ಇಡೀ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ. ಆದರೂ ಗ್ರಾಮದ ದೇವಾಲಯ ಜಾಗವನ್ನು ವಕ್ಫ್‌ಗೆ ಸೇರಿಸಿರುವುದು ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣಕ್ಕೆ ನಿದರ್ಶನವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ರಾಜ್ಯದಲ್ಲಿ 2019ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ದೇವಾಲಯದ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈ ಬಗ್ಗೆ ನಿಮ್ಮ ನಿಲುವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಛಲವಾದಿ ನಾರಾಯಣಸ್ವಾಮಿ, ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಿರುವುದು ಅಧಿಕಾರಿ ವರ್ಗ. ಯಾವುದೇ ಸರ್ಕಾರದ ಅವಧಿಯಲ್ಲಿ ಆಗಿದ್ದರೂ ಅಂತಹ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಿ ಎಂದರು.