ಜಿಲ್ಲೆ

ಮಾತಾಜಿ ಅಧ್ಯಾತ್ಮ ಸಾಧಕಿ: ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀ

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಅಧ್ಯಾತ್ಮ ಶಿಷ್ಯೆ ತಪೋವನೀ ಮಾತಾ(ಸುಭದ್ರಾ ಮಾತಾಜಿ) ಆತ್ಮಕಥೆಯ ಕನ್ನಡ ಅವತರಣಿಕೆ ಭಾನುವಾರ ಹರಿದ್ವಾರದಲ್ಲಿ ಲೋಕಾರ್ಪಣೆಗೊಂಡಿತು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಪತಂಜಲಿ ಯೋಗಪೀಠದ ಆಚಾರ್ಯ ಬಾಲಕೃಷ್ಣ ಜಂಟಿಯಾಗಿ ಕೃತಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಶ್ರೀಗಳು, ಹಿಂದಿಯಲ್ಲಿರುವ ಕೃತಿಯನ್ನು ನಿವೃತ್ತ ಉಪನ್ಯಾಸಕ, ಚಿಂತಕ ಡಾ.ಜಿ.ಭಾಸ್ಕರ ಮಯ್ಯ ಸುಂದರವಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಸುಭದ್ರಾ ಮಾತಾಜಿ ಕನ್ನಡದ ಜನ ಹಾಗೂ ಉಡುಪಿಗೆ ಅತ್ಯಂತ ಹೆಮ್ಮೆ ತರಬಲ್ಲ ಸಾಧಕಿ. ಅಧ್ಯಾತ್ಮ ಸಾಧನೆಯ ತುಡಿತವಿರುವವರಿಗೆ ಮತ್ತು ಸಾಹಸಿ ಬದುಕಿನ ರೋಚಕತೆಯಲ್ಲಿ ಆಸಕ್ತಿ ಇರುವವರಿಗೆ ಮಾದರಿ ಎಂದರು.

ತಪೋವನೀ ಸುಭದ್ರಾ ಮಾತಾ ಧರ್ಮಾರ್ಥ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಹಾದ್ದೂರ್ ಸಿಂಗ್ ವರ್ಮಾ, ಶ್ರೀಗಳ ಆಪ್ತಕಾರ್ಯ ದರ್ಶಿಗಳಾದ ವಿಷ್ಣು ಆಚಾರ್ಯ, ಅನಂತ ಜಿ.ಎ, ಕೃಷ್ಣ ಭಟ್, ಹರಿದ್ವಾರ ಪೇಜಾವರ ಶಾಖಾ ಮಠದ ವ್ಯವಸ್ಥಾಪಕ ಮನೋಜ್, ಅನೂಪ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದ್ದರು.

ಮಾತಾಜಿ ಮೂಲತಃ ಉಡುಪಿಯವರು

ಉಡುಪಿ ಮೂಲದ ಸುಭದ್ರಾ ಮಾತಾಜಿ, ಎಳೆಯ ವಯಸ್ಸಲ್ಲೇ ಜೀವನದ ಜಂಜಾಟಗಳನ್ನು ಎದುರಿಸಿ ಅಧ್ಯಾತ್ಮದ ಸೆಳೆತಕ್ಕೀಡಾಗಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಮಂತ್ರದೀಕ್ಷೆ ಪಡೆದು, ಹಿಮಾಲಯ ಸೇರಿ ಪಾಂಡವರು ಕುರುಕ್ಷೇತ್ರ ಯುದ್ಧ ನಂತರ ತಪಸ್ಸಾಚರಿಸಿದ್ದ, ಹಾಗೂ ಸಮುದ್ರಮಟ್ಟದಿಂದ 4000 ಮೀ.ಎತ್ತರದ ದುರ್ಗಮ ತಪೋವನದಲ್ಲಿ ಎಲ್ಲ ಪ್ರಾಕೃತಿಕ ಸವಾಲುಗಳನ್ನೂ ಎದುರಿಸಿ 9 ವರ್ಷ ಏಕಾಂಗಿಯಾಗಿ ತಪಸ್ಸಾಚರಿಸಿದವರು. ಇಂತಹ ಅಧ್ಯಾತ್ಮ ಸಾಧನೆ ಮಾಡಿದ ಜಗತ್ತಿನ ಪ್ರಥಮ ಮಹಿಳೆ ಎಂಬ ಖ್ಯಾತಿ ಅವರದು. ಬಳಿಕ ಹರಿದ್ವಾರದಲ್ಲೇ ಆಶ್ರಮ ಸ್ಥಾಪಿಸಿ ಸಾಧು ಸಂತರು, ಯಾತ್ರಿಗಳಿಗೆ ಧರ್ಮಾರ್ಥ ಊಟ, ವಸತಿ, ಆರೋಗ್ಯ ಸೇವೆಗಳನ್ನು ಮಾಡಿ ಪ್ರಸಿದ್ಧರಾಗಿದ್ದಾರೆ. ಅನೇಕ ಸಂದರ್ಭದಲ್ಲಿ ಉಡುಪಿ ಕೃಷ್ಣ ಮತ್ತು ಗುರು ಪೇಜಾವರ ಶ್ರೀಗಳನ್ನು ತಮ್ಮ ಭಾಷಣದಲ್ಲಿ ಮಾತಾಜಿ ಉಲ್ಲೇಖಿಸಿದ್ದರು. 90 ವರ್ಷದ ಸುಭದ್ರಾ ಮಾತಾಜಿ ಹರಿದ್ವಾರದ ರಾಮಕೃಷ್ಣಾಶ್ರಮ ಆಸ್ಪತ್ರೆಯಲ್ಲಿ ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.