ಮುಳಬಾಗಿಲು: ನಾನಾ ಬಗೆಯ ಬಣ್ಣಗಳನ್ನು ಗುರುತಿಸುವುದರೊಂದಿಗೆ ಚಿತ್ರಕಲೆ ಮೈಗೂಡಿಸಿಕೊಂಡರೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪಠ್ಯ ವಿಷಯಗಳನ್ನು ಹೆಚ್ಚಿನ ಕಾಲ ನೆನಪಿನಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ ಎಂದು ನೀನಾಸಂನ (ನೀಲಕಂಠೇಶ್ವರ ನಾಟ್ಯ ಸೇವಾ ಸಂಘ) ಕಲಾವಿದ ಸಂತೋಷ್ ಹೇಳಿದರು.
ನಗರದ ಕುಂಬಾರಪಾಳ್ಯದಲ್ಲಿರುವ ಡಿ.ವಿ. ಗುಂಡಪ್ಪ ಶಾಲೆಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಯಾವುದೇ ಒಂದು ಪಠ್ಯ ವಿಷಯ ಹೆಚ್ಚಿನ ಕಾಲ ನೆನಪಿನಲ್ಲಿ ಇಟ್ಟುಕೊಳ್ಳಲು ಕೆಲ ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯ ಇಟ್ಟುಕೊಂಡರೆ ಸಾಕಷ್ಟು ವಿಷಯಗಳನ್ನು ಹೆಚ್ಚಿನ ಕಾಲ ನೆನಪಿನಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಲಾವಿದ ಈಶ ಮಾತನಾಡಿ, ಚಿತ್ರಕಲೆಯನ್ನು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಂಡರೆ ವಿಜ್ಞಾನ, ಗಣಿತ, ಜೀವಶಾಸ್ತ್ರ ಸೇರಿ ನಾನಾ ಪಠ್ಯ, ಪಠ್ಯೇತರ ಚಟುವಟಿಕೆಗಳ ವಿಷಯಗಳಲ್ಲಿ ಹಲವು ಚಿತ್ರಗಳನ್ನು ಸುಲಭವಾಗಿ ಬರೆಯಬಹುದು. ಇದರಿಂದ ಪರೀಕ್ಷೆಗಳಲ್ಲಿ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದು ಹೆಚ್ಚಿನ ಅಂಕ ಪಡೆದುಕೊಳ್ಳಬಹುದು. ಇದರಿಂದಾಗಿ ಚಿತ್ರಕಲೆಯಲ್ಲಿ ಸುಲಭವಾಗಿ ರಚನೆ ಮಾಡುವಂತಹ ಚಿತ್ರಗಳನ್ನು ಬರೆಯಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.
ಭಾರತ, ಕರ್ನಾಟಕ ಸೇರಿ ನಾನಾ ಜಿಲ್ಲೆ ಹಾಗೂ ರಾಜ್ಯಗಳ ಭೂಪಟಗಳನ್ನು ಬರೆಯುವ ಮೂಲಕ ಮಕ್ಕಳಿಗೆ ಚಿತ್ರಕಲೆ ಪರಿಚಯಿಸಿದರು. ಅಲ್ಲದೆ ಪರಿಸರ, ಬೆಟ್ಟಗುಡ್ಡ, ಮರ ಗಿಡ ಇವುಗಳನ್ನು ಸುಲಭವಾಗಿ ಚಿತ್ರಕಲೆ ಮಾಡಲು ಕೆಲವೊಂದು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಸಲಹೆ ಮತ್ತು ಸೂಚನೆ ನೀಡಿದರು.