ದಾವಣಗೆರೆ: ಬರುವ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಗರದ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನದ ಜತೆಗೆ ಚಿತ್ರಕಲಾ ಪ್ರದರ್ಶನ ಏರ್ಪಡಿಸಬೇಕು ಎಂದು ಎಸ್‌ಎಸ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ದಾವಣಗೆರೆ ಚಿತ್ರಕಲಾ ಪರಿಷತ್ ಹಾಗೂ ಹಿಂದು ಯುವಶಕ್ತಿ ಸಂಘಟನೆ ಸಹಯೋಗದಲ್ಲಿ ನಗರದ ಎಂಸಿಸಿ ಎ ಬ್ಲಾಕ್‌ನ ತೊಗಟವೀರ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವರ್ಣ ಗಣೇಶ ಚಿತ್ರಕಲಾ ಪ್ರದರ್ಶನದ ಸಮಾರೋಪದಲ್ಲಿ ಮಾತನಾಡಿದರು.
ಗಾಜಿನ ಮನೆಯಲ್ಲಿ ಒಂದು ತಿಂಗಳ ಕಾಲ ಪ್ರದರ್ಶನ ಏರ್ಪಡಿಸಿದರೆ ಸಾರ್ವಜನಿಕರು ಚಿತ್ರಕಲೆ ವೀಕ್ಷಿಸುವುದರಿಂದ ಕಲಾವಿದರಿಗೆ ಹೆಚ್ಚಿನ ಮಾನ್ಯತೆ ದೊರೆಯಲಿದೆ ಎಂದು ತಿಳಿಸಿದರು.
ಪ್ರದರ್ಶನದಲ್ಲಿ ಗಣೇಶ, ಶಿಲ್ಪಕಲೆ ಹಾಗೂ ಮಹಾಭಾರತದ ಸನ್ನಿವೇಶದ ಚಿತ್ರಗಳು ಸುಂದರವಾಗಿ ಮೂಡಿಬಂದಿವೆ.
ಕಲಾವಿದರಿಗೆ ನಿಖರತೆ ಇದ್ದಾಗ ಸುಂದರ ಕಲಾಕೃತಿ ಮೂಡಿಬರಲು ಸಾಧ್ಯ. ಒಂದು ಕಲಾಕೃತಿಯ ರಚನೆ ಹಿಂದೆ ಕಲಾವಿದರ ಕಠಿಣ ಪರಿಶ್ರಮ ಏನೆಂಬುದು ತಿಳಿದಿದೆ ಎಂದರು.
ಬಹುತೇಕ ಚಿತ್ರಕಲಾವಿದರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎನ್ನಲಾಗಿದ್ದು ಎಸ್.ಎಸ್.ಕೇರ್ ಟ್ರಸ್ಟ್‌ನಿಂದ ಅಗತ್ಯ ನೆರವು ನೀಡಲು ಸಿದ್ಧ.
ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಅಪ್ಪಾಜಿಯವರೂ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಲಿದ್ದಾರೆ.
ಆಕರ್ಷಕ ಪೇಂಟಿಂಗ್ ಉಡುಗೊರೆ ನೀಡಲು ಸೂಕ್ತವಾಗಿದ್ದು, ಕೆಲವು ಕಲಾಕೃತಿ ಖರೀದಿಸುವುದಾಗಿ ಹೇಳಿದರು.
ದಾವಣಗೆರೆ ಚಿತ್ರಕಲಾ ಪರಿಷತ್ ಅಧ್ಯಕ್ಷ ಸದಾನಂದ ಹೆಗಡೆ ಮಾತನಾಡಿ, ಕರೋನಾ ಹಾಗೂ ನಂತರದ ದಿನಗಳಲ್ಲಿ ಚಿತ್ರಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ಪರಿಷತ್ ಕಾರ್ಯದರ್ಶಿ ಡಿ.ಶೇಷಾಚಲ, ರಾಮನಾಥ್, ಪಾಲಿಕೆ ಸದಸ್ಯ ಎ. ನಾಗರಾಜ್, ಮಾಜಿ ಮೇಯರ್ ಅಶ್ವಿನಿ ಪ್ರಶಾಂತ್, ಕಲಾವಿದರಾದ ಎ. ಮಹಾಲಿಂಗಪ್ಪ, ಆರ್. ಶಿವಕುಮಾರ್, ರಂಗನಾಥ್ ಕುಲಕರ್ಣಿ, ಶಾಂತಯ್ಯ ಪರಡಿಮಠ, ದತ್ತಾತ್ರೇಯ ಭಟ್, ಡಿ.ಕೆ. ಅಶೋಕ್, ಹರಿಶ್ಚಂದ್ರ ಪತ್ತಾರ್ ಇತರರು ಇದ್ದರು. ಎಲ್ಲ ಕಲಾವಿದರಿಗೆ ಪ್ರಶಸ್ತಿ ಪತ್ರ ವಿತರಿಸಿ ಸನ್ಮಾನಿಸಲಾಯಿತು.