ಉಡುಪಿ: ಉಚ್ಚಿಲ ದಸರಾ ಮಹೋತ್ಸವದ ನಿಮಿತ್ತ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಸಹಯೋಗದೊಂದಿಗೆ ಅ.5ರಂದು ಮಧ್ಯಾಹ್ನ 2 ಗಂಟೆಗೆ ಉಚ್ಚಿಲ ಮೊಗವೀರ ಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಿದ್ದಾಗಿ ಬ್ಯಾಂಕ್ನ ಅಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ನಾಡಹಬ್ಬ ದಸರಾವನ್ನು ಚಿತ್ರ ರಚನೆಯ ವಿಷಯವಾಗಿ ಆಯ್ಕೆ ಮಾಡಿದ್ದು, ಈ ವಿಷಯಕ್ಕೆ ಸಂಬಂಧಿಸಿದ ಚಿತ್ರವನ್ನೇ ಬಿಡಿಸಬೇಕು.
ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಕಿರಿಯರ ವಿಭಾಗ (1ರಿಂದ 4ನೇ ತರಗತಿ), ಪ್ರಾಥಮಿಕ ವಿಭಾಗ (5ರಿಂದ 7ನೇ ತರಗತಿ), ಹೈಸ್ಕೂಲ್ ವಿಭಾಗ (8ರಿಂದ 10ನೇ ತರಗತಿ), ಕಾಲೇಜು ವಿಭಾಗ (ಪದವಿ ಪೂರ್ವ ಮತ್ತು ಪದವಿ ತರಗತಿ) ಹಾಗೂ ಸಾರ್ವಜನಿಕ ವಿಭಾಗದಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಡ್ರಾಯಿಂಗ್ ಶೀಟ್ ಸ್ಥಳದಲ್ಲೇ ಒದಗಿಸಲಿದ್ದು, ಉಳಿದ ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ 3 ಸಮಾಧಾನಕರ ಪ್ರಶಸ್ತಿಯಿದೆ. ವಿಜೇತರಿಗೆ ನಗದು ಬಹುಮಾನ, ಸ್ಮರಣಿಕೆ, ಪ್ರಶಸ್ತಿ ಪ್ರಮಾಣಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಪುರಸ್ಕರಿಸಲಾಗುವುದು ಎಂದು ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ
ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಆನ್ಲೈನ್ ಮೂಲಕವೂ ಹೆಸರು ನೋಂದಣಿಗೆ ಅವಕಾಶವಿದೆ. ಸ್ಫರ್ಧೆಯ ವಿವರಗಳು ಹಾಗೂ ನೋಂದಣಿಗಾಗಿ ಮಹಾಲಕ್ಷ್ಮೀ ಬ್ಯಾಂಕ್ನ ವೆಬ್ಸೈಟ್ www.mahalakshmicoopbank.com ಹಾಗೂ ಮಾಹಿತಿಗಾಗಿ ಮೊ.ಸಂ. 9972120332, 9845016830 ಸಂಪರ್ಕಿಸಬಹುದು. ಸಾರ್ವಜನಿಕರೂ ಸಹ ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಯಶ್ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.