ಹುಬ್ಬಳ್ಳಿ: ‘ಮಗು-ನಗು’ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು, ಚಿತ್ರಕಲಾ ಸ್ಪರ್ಧೆಯಲ್ಲೂ ತಾವು ಕಡಿಮೆ ಇಲ್ಲವೆಂಬಂತೆ ಭಾಗವಹಿಸಿ ತಮ್ಮ ಕಲಾಪ್ರದರ್ಶನವನ್ನು ಶನಿವಾರ ತೋರಿದರು.
ಮಕ್ಕಳ ದಿನಾಚರಣೆ ನಿಮಿತ್ತ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಸಹಯೋಗದಲ್ಲಿ ಇಲ್ಲಿನ ವಿಠೋಬಾ ನಗರದ ಹೊಸೂರಿನ ಗೋಲ್ಡನ್ ಟೌನ್ನಲ್ಲಿರುವ ಸ್ಪರ್ಶಂ ಮಕ್ಕಳ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ಗೆದ್ದ ಮಕ್ಕಳು ಪ್ರಶಸ್ತಿ ಫಲಕ ಹಿಡಿದು ಬೀಗಿದರು. ಮಕ್ಕಳ ಸ್ಪಂದನೆ ಕಂಡು ವೈದ್ಯಕೀಯ ಸಿಬ್ಬಂದಿ, ಪಾಲಕರು ಹಿರಿ ಹಿರಿ ಹಿಗ್ಗಿದರು. ಮಕ್ಕಳ ಗದ್ದಲವಿದ್ದರೂ ಇದು ಜಯಘೊಷವೆಂದು ಭಾವಿಸಿ ಎಲ್ಲರೂ ಚಪ್ಪಾಳೆ ಹೊಡೆದು ಗೆದ್ದ ಮಕ್ಕಳಿಗೆ ಪ್ರೋತ್ಸಾಹಿಸಿದರು.
ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳೆಂದರೆ ದೇವರು. ಅವರ ಕಾಟ-ಕೀಟಲೆಗಳನ್ನು ಸಹಿಸುವ ತಾಯಂದಿರೂ ದೇವರೇ. ಇಂಥ ತಾಯಂದಿರು ತಮ್ಮ ಮಕ್ಕಳು ಪರಿಪೂರ್ಣವಾಗಿ ಬೆಳೆಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗದಂತೆ ನೋಡಿಕೊಳ್ಳುವ ‘ವೈದ್ಯೋ ನಾರಾಯಣ ಹರಿಃ’ ಇದ್ದಾರೆ ಎಂದು ವೈದ್ಯರನ್ನು ಬಣ್ಣಿಸಿದರು.
ಈಗೀಗ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಆವಿಷ್ಕಾರ ಒಡಮೂಡುತ್ತಿವೆ. ಮಕ್ಕಳು ಆರೋಗ್ಯದಿಂದ ಇರಬೇಕೆಂದರೆ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸಬೇಕು. ವೈದ್ಯರು ಹೇಳಿದಂತೆ ಆಹಾರ ಪದ್ಧತಿಯನ್ನು ಮಕ್ಕಳಿಗೆ ರೂಢಿಸಬೇಕು. ದೇಶದ ಮುಂದಿನ ಭವಿಷ್ಯದ ಕಣ್ಮಣಿಗಳನ್ನು ನಾವು ಜತನದಿಂದ ಕಾಯಬೇಕು ಎಂದು ಕಿವಿ ಮಾತು ಹೇಳಿದರು.
ಆಸ್ಪತ್ರೆ ನಿರ್ದೇಶಕ ಡಾ. ಮಹೇಶ ಹೊಳೆಯಣ್ಣವರ ಮಾತನಾಡಿ, ಚಿಕ್ಕಮಕ್ಕಳನ್ನು ಸಲಹುದು ಎಂದರೆ ತಂದೆ-ತಾಯಿಗೆ ಕಷ್ಟದ ಕೆಲಸ. ಆದರೆ, ನಾವು ಚಿಕ್ಕವರಿದ್ದಾಗ ನಮ್ಮ ತಂದೆ-ತಾಯಿ ನಮ್ಮನ್ನು ಸಂರಕ್ಷಿಸಿರುವುದು ನೆನಪಿಸಿಕೊಳ್ಳಬೇಕು. ಹಿರಿ-ಕಿರಿ ತಲೆಗಳ ಸಮಾಗಮವೇ ಸಾಮರಸ್ಯದ ಬದುಕು. ಹೀಗಿದ್ದಾಗ ಮಾತ್ರ ಕುಟುಂಬದ ಒಗ್ಗೂಡುವಿಕೆ, ಪ್ರೋತ್ಸಾಹಿಸುವಿಕೆ ಮುಂದುವರಿಯುತ್ತದೆ ಎಂದರು.
ಆರೋಗ್ಯವಂತ ಮಗು-ನಗು ಹಾಗೂ ಚಿತ್ರಿಕಲಾ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ತೀರ್ಪಗಾರರಾಗಿ ಡಾ. ಶಂಭು ಅಂಗಡಿ, ಡಾ. ವಿಜಯಶ್ರೀ ಕೆ.ಎಂ., ಚಿತ್ರಕಲಾವಿದ ಗೋವಿಂದ ಸೌಧಾಗರ ಆಗಮಿಸಿದ್ದರು. ವೈದ್ಯಕೀಯ ನಿರ್ದೇಶಕ ಡಾ. ಶಿರೀಷ ಪಾಟೀಲ, ನಿರ್ದೇಶಕ ಡಾ. ರಾಘವೇಂದ್ರ ದೇಸಾಯಿ ಇದ್ದರು. ಆಸ್ಪತ್ರೆ ಆಡಳಿತಾಧಿಕಾರಿ ಆನಂದ ಬಾಳಿ ನಿರೂಪಿಸಿದರು.
ಸ್ಪರ್ಧೆಯಲ್ಲಿ ಗೆದ್ದ ಮಕ್ಕಳು
* ಆರೋಗ್ಯವಂತ ಮಗು
9 ತಿಂಗಳಿಂದ 2 ವರ್ಷ: ಸಮೃದ್ಧ (ಪ್ರಥಮ), ಅನುಶಿಕಾ ಕಲ್ಬುರ್ಗಿ (ದ್ವಿತೀಯ), ಭುವಿಕಾ ಹಡಪದ (ತೃತೀಯ)
2ರಿಂದ 4 ವರ್ಷ: ಖುಷಿ ನ್ಯಾಮಗೌಡ (ಪ್ರಥಮ), ಸಿದ್ಧಾರ್ಥ (ದ್ವಿತೀಯ), ಅಥರ್ವ (ತೃತೀಯ)
* ಆರೋಗ್ಯವಂತ ನಗು
1ರಿಂದ 7 ವರ್ಷ: ಪಾಥಿರ್Ì ಸಾಳುಂಕೆ (ಪ್ರಥಮ), ದಿಯಾ ಪಟ್ಟಣಶೆಟ್ಟಿ (ದ್ವಿತೀಯ), ತನ್ವಿ ಮಿಸ್ಕಿನ್ (ತೃತೀಯ)
7ರಿಂದ 14 ವರ್ಷ: ಶಾನ್ವಿ ತಳವಾರ (ಪ್ರಥಮ), ವೇದರಾಜ ಹೊಸಕೇರಿ (ದ್ವಿತೀಯ), ನವ್ಯಾ ಯಾವಗಲ್ (ತೃತೀಯ)
* ಚಿತ್ರಕಲೆ
4ರಿಂದ 7 ವರ್ಷ: ಪ್ರಿಯಾಲ್ ಕಬಾಡೆ (ಪ್ರಥಮ), ಸಂಸ್ಕಾರ್ ಹಿರೇಮಠ (ದ್ವಿತೀಯ), ಸಾತ್ವಿಕ್ ಜಾಬಗೌಡರ (ತೃತೀಯ)
7ರಿಂದ 14 ವರ್ಷ: ಸುಖದಾ ಮುರಗೋಡ (ಪ್ರಥಮ), ಪಿಹೂ ಕಬಾಡೆ (ದ್ವಿತೀಯ), ಪ್ರಕೃತಿ ಕೊಣ್ಣೂರ (ತೃತೀಯ)
ಮಗುವಿನ ನಗುವೇ ಚೆಂದ. ಈ ನಗುವಿಗಾಗಿಯೇ ಸ್ಪರ್ಧೆ ಏರ್ಪಡಿಸಬಾರದೇಕೆ? ಎಂದು ನನಗಿಸಿತು. ಹಾಗಾಗಿ ‘ವಿಜಯವಾಣಿ’ ಸಹಯೋಗದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಇದನ್ನೂ ಸೇರಿಸಲಾಯಿತು. ಇದು ಬರೀ ಸ್ಪರ್ಧೆಯಷ್ಟೇ ಅಲ್ಲ, ಜೀವ-ಜೀವನದ ಸಾರ. ಬಾಯಿಯ ಆರೋಗ್ಯದ ಮಹತ್ವವೇ ಅಂಥದ್ದು.
-ಡಾ. ಚಂದ್ರಶೇಖರ ಯಾವಗಲ್, ಮಕ್ಕಳ ದಂತ ವೈದ್ಯ
ಮಕ್ಕಳ ಕೈಯಲ್ಲಿ ಮೊಬೈಲ್ ಫೋನ್ ಕೊಡಬೇಡಿ. ಇದು ಮಕ್ಕಳ ಬೌದ್ಧಿಕ ಮಟ್ಟವನ್ನು ಕುಸಿಯುವಂತೆ ಮಾಡುತ್ತದೆ. ಮಕ್ಕಳೊಂದಿಗೆ ಆಟವಾಡಲು ಹೊರಗಡೆ ಬಿಡಿ. ಮಕ್ಕಳ ಆರೋಗ್ಯ ವೃದ್ಧಿಯಾಗುವುದಲ್ಲದೇ, ಬೌದ್ಧಿಕತೆ ವಿಸ್ತಾರವೂ ಸೃಜನೆಯಾಗಲಿದೆ. ನಮ್ಮ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸ್ಪರ್ಧೆಗಳು ಮಕ್ಕಳನ್ನು ಆರೋಗ್ಯವಂತರಾಗಿಡಲು ಪಾಲಕರಿಗೆ ಮಾರ್ಗದರ್ಶನ ನೀಡಿವೆ.
-ಡಾ. ಪ್ರಕಾಶ ವಾರಿ, ಸ್ಪರ್ಶಂ ಆಸ್ಪತ್ರೆ ಆಡಳಿತ ಮಂಡಳಿ ಚೇರ್ಮನ್